ನಿಮ್ಮ ಜೀವನದಲ್ಲಿ ಯಶಸ್ಸು ಕಾಣಲು ಶಿವದೇವರ ಈ ಸೂತ್ರಗಳನ್ನು ಅನುಸರಿಸಿ..!
Wednesday, February 14, 2024
ನಿಮ್ಮ ಕೆಲಸಕ್ಕೆ ನೀವೇ ಹೊಣೆ : ನೀವು ಕೆಟ್ಟ ಕೆಲಸ ಮಾಡಿ ಇಲ್ಲ ಒಳ್ಳೆ ಕೆಲಸ ಮಾಡಿ, ನೀವು ಮಾಡ್ತಿರುವ ಪ್ರತಿಯೊಂದು ಕೆಲಸಕ್ಕೂ ನೀವೇ ಜವಾಬ್ದಾರರು. ನಿಮ್ಮಿಂದ ಬೇರೆಯವರು ಪಾಪದ ಕೆಲಸ ಮಾಡಿಸಿದ್ರೂ, ಯಾರಿಗೂ ತಿಳಿಯುವುದಿಲ್ಲ ಎನ್ನುವ ಭಾವನೆಯಲ್ಲಿ ನೀವೇ ಪಾಪ ಮಾಡಿದ್ರೂ ಅದರ ಪರಿಣಾಮದಿಂದ ಪಾರಾಗಲು ಸಾಧ್ಯವಿಲ್ಲ. ಪಾಪದ ಫಲವನ್ನು ನೀವೊಬ್ಬರೇ ಅನುಭವಿಸಬೇಕಾಗುತ್ತದೆ. ನಿಮ್ಮ ಮನಸ್ಸು, ಮಾತು ಮತ್ತು ಕ್ರಿಯೆ ಎಲ್ಲವೂ ಪಾಪದ ಕೆಲಸದಿಂದ ದೂರವಿರಬೇಕು ಎಂದು ಶಿವಪುರಾಣದಲ್ಲಿ ಹೇಳಲಾಗಿದೆ.
ಮೋಹ ಬಿಡಿ : ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲ ಒಂದು ವಸ್ತು, ಜಾಗ ಅಥವಾ ವ್ಯಕ್ತಿ ಮೇಲೆ ಅತಿಯಾದ ಮೋಹ ಇರುತ್ತದೆ. ಮೋಹ, ಕೆಟ್ಟ ಕೆಲಸಗಳನ್ನು ಮಾಡಲು ದಾರಿಯಾಗುತ್ತದೆ. ಇದೇ ದುಃಖಕ್ಕೂ ಕಾರಣವಾಗುತ್ತದೆ. ಇದ್ರಿಂದ ನಿಮ್ಮ ಜೀವನದಲ್ಲಿ ನೀವು ಸಾಕಷ್ಟು ವೈಫಲ್ಯಗಳನ್ನು ಕಾಣಬೇಕಾಗುತ್ತದೆ. ಈ ಮೋಹ, ಬಾಂಧವ್ಯ ಬಿಟ್ಟಾಗ ಯಶಸ್ಸು, ಸಂತೋಷ ಸಿಗಲು ಸಾಧ್ಯ.
ಪಶುತ್ವ ಬಿಟ್ಟು ಮನುಷ್ಯನಾಗಿ : ಮೋಹ, ದ್ವೇಷ, ಅಪಮಾನ, ಹಿಂಸೆ, ಕ್ರೌರ್ಯ ಎಲ್ಲವೂ ಪಶು ಪ್ರವೃತ್ತಿ. ಪ್ರತಿಯೊಬ್ಬರೂ ಇದನ್ನು ಬಿಟ್ಟು ಮನುಷ್ಯನಾಗಬೇಕು. ಧ್ಯಾನ, ಭಕ್ತಿ, ಸಾಧನೆ ಮಾರ್ಗ ಅನುಸರಿಸಬೇಕು. ಈ ಮಾರ್ಗಗಳು ಜೀವನಕ್ಕೆ ನೆಮ್ಮದಿ ನೀಡುವ ಜೊತೆಗೆ ನಿಮಗೆ ಸುಲಭವಾಗಿ ಮುಕ್ತಿ ಸಿಗುವಂತೆ ಮಾಡುತ್ತದೆ.
ಸಂಪತ್ತಿನ ಸಂಗ್ರಹ : ಸಂಪತ್ತಿನ ಸಂಗ್ರಹದ ವೇಳೆ ನೀವು ಯಾವ ಮಾರ್ಗ ಅನುಸರಿಸಿದ್ದೀರಿ ಎಂಬುದು ಮುಖ್ಯವಾಗುತ್ತದೆ. ನೀವು ಯಾವಾಗ್ಲೂ ಸರಿಯಾದ ಮಾರ್ಗದಲ್ಲಿ ಸಾಗಿ ಸಂಪತ್ತನ್ನು ಗಳಿಸಬೇಕು. ನೀವು ಸಂಪಾದನೆ ಮಾಡಿದ ಸಂಪತ್ತನ್ನು ಮೂರು ಭಾಗವಾಗಿ ವಿಂಗಡನೆ ಮಾಡಬೇಕು. ಒಂದು ಭಾಗ ನಿಮ್ಮ ಖರ್ಚಿಗೆ, ಇನ್ನೊಂದು ಭಾಗ ದಾನ – ಧರ್ಮಕ್ಕೆ ಹಾಗೂ ಮೂರನೇ ಭಾಗ ಭವಿಷ್ಯಕ್ಕಾಗಿ ಮೀಸಲಿಡಬೇಕು.