ಮದುವೆಯಾದ ಮೂರೇ ದಿನಕ್ಕೆ ತೊರೆದ ಪತ್ನಿ: ರಾಷ್ಟ್ರಮಟ್ಟದ ಕಬ್ಬಡ್ಡಿ ಆಟಗಾರ ಆತ್ಮಹತ್ಯೆಗೆ ಶರಣು
Wednesday, February 7, 2024
ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾದ ಪತ್ನಿ ಮೂರೇ ದಿನಕ್ಕೆ ತೊರೆದು ಹೋದಳೆಂದು ಮನನೊಂದು ನೇಣು ಬಿಗಿದು ಕೊಂಡು ಆತ್ಮಹತ್ಯೆ ಯತ್ನಿಸಿದ್ದ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ವಿನೋದ್ (24) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ತೇಗೂರು ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ತೇಗೂರು ಗ್ರಾಮದ ಯುವತಿ ಹಾಗೂ ವಿನೋದ್ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಯುವತಿ ಮನೆಯವರ ವಿರೋಧವಿತ್ತು. ಆದ್ದರಿಂದ ಯುವತಿ ಮನೆಯವರ ವಿರೋಧದ ನಡುವೆಯೇ ಇಬ್ಬರೂ ಓಡಿ ಹೋಗಿ ಮದುವೆಯಾಗಿದ್ದರು. ಡಿ.10 ರಂದು ವಿನೋದ್ ಹಾಗೂ ಯುವತಿ ಮದುವೆಯಾಗಿದ್ದರು.
ಇವರು ದಾಂಪತ್ಯ ಜೀವನ ಪ್ರವೇಶಿಸಿ ಸಂಸಾರ ಶುರು ಮಾಡುವ ಹೊತ್ತಲ್ಲೇ ಪೊಲೀಸರು ನವ ಜೋಡಿಯನ್ನು ಠಾಣೆಗೆ ಕರೆ ತಂದಿದ್ದರು. ಯುವತಿಯ ಕುಟುಂಬಸ್ಥರ ದೂರಿನ ಮೇರೆಗೆ ಠಾಣೆಯಲ್ಲಿ ಪಂಚಾಯತಿಗೆ ನಡೆದಿದ್ದು, ಯುವತಿ ತನ್ನ ತಾಯಿ ಮನೆಗೆ ಹೋಗುವುದಾಗಿ ಹೇಳಿಕೆ ನೀಡಿದ್ದಾಳೆ. ಇದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.