ಮಂಗಳೂರು: ಜೆರೋಸಾ ಶಾಲೆಯ ಧರ್ಮನಿಂದನೆ ಪ್ರಕರಣ- ಪೋಷಕಿಗೆ ವಿದೇಶದಿಂದ ಬೆದರಿಕೆ ಕಾಲ್, ಹುದ್ದೆಯಿಂದಲೇ ವಜಾ ಮಾಡಿದ ಹೋಲಿ ಏಂಜಲ್ ಸಂಸ್ಥೆ
Tuesday, February 20, 2024
ಮಂಗಳೂರು: ನಗರದ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾರಿಂದ ಹಿಂದೂಧರ್ಮದ ನಿಂದನೆ ಆರೋಪದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಹಾಗೂ ಆಡಿಯೋ ವೈರಲ್ ಮಾಡಿದ್ದಾರೆಂದು ಪೋಷಕಿಯೊಬ್ಬರಿಗೆ ವಿದೇಶದಿಂದ ಬೆದರಿಕೆ ಕರೆ ಬರುತ್ತಿದೆ ಎಂದು ನಗರದ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಗರೋಡಿ ನಿವಾಸಿ ಕವಿತಾ ಅವರ ಕುಟುಂಬದ ಫೋಟೋದೊಂದಿಗೆ, ಫೋನ್ ನಂಬರ್ ಕೂಡಾ ವೈರಲ್ ಮಾಡಲಾಗಿದೆ. ಪರಿಣಾಮ ಅವರಿಗೆ ವಿದೇಶದಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿದೆ ಎಂದು ದೂರಲಾಗಿದೆ. ಕವಿತಾ ಅವರ ಪುತ್ರಿ ಜೆರೋಸಾ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇತ್ತೀಚೆಗೆ ಸಿಸ್ಟರ್ ಪ್ರಭಾ ವಿರುದ್ಧ ಪೋಷಕರ ಪ್ರತಿಭಟನೆಯಲ್ಲೂ ಭಾಗವಹಿಸಿದ್ದಳು. ಈ ನಡುವೆ, ಜೆರೋಸಾ ಶಿಕ್ಷಕಿಯ ವಿರುದ್ಧ ಆಡಿಯೋ ವೈರಲ್ ಮಾಡಿರುವುದು ಕವಿತಾ ಎಂದು ಆರೋಪಿಸಿ ಬೆದರಿಕೆ ಬರಲಾರಂಭಿಸಿದೆ. ಕತಾರ್, ದುಬೈ, ಸೌದಿ ಸೇರಿ ಹಲವೆಡೆಯಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು, ಅವಾಚ್ಯವಾಗಿ ನಿಂದಿಸಿ ವಾಟ್ಸ್ಆ್ಯಪ್ಗೆ ಅಶ್ಲೀಲವಾದ ಆಡಿಯೋ ಸಂದೇಶ ಕಳುಹಿಸಲಾಗುತ್ತಿದೆ.
ಅಲ್ಲದೆ ಕವಿತಾ ಅವರು ಶಿಕ್ಷಕಿ ವಿರುದ್ಧ ಮಾಧ್ಯಮದಲ್ಲಿ ಮಾತನಾಡಿರುವ ಹಿನ್ನಲೆಯಲ್ಲಿ ಅವರು ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಹೋಲಿ ಏಂಜಲ್ ಶಿಕ್ಷಣ ಸಂಸ್ಥೆ ಅವರನ್ನು ಹುದ್ದೆಯಿಂದಲೇ ವಜಾಗೊಳಿಸಿದೆ. ತಮ್ಮ ಸೇವೆ ನಮಗೆ ಅಗತ್ಯವಿಲ್ಲ ಎಂದು ಅಲ್ಲಿನ ಫಾದರ್ ಅವರೇ ಸೇವೆಯಿಂದ ವಜಾಗೊಳಿಸಿದ್ದಾರೆ ಎಂದು ಕವಿತಾ ದೂರಿದ್ದಾರೆ.