ಮಳಲಿ ಮಂದಿರ ಮಸೀದಿ ವಿವಾದ ಪ್ರಕರಣ - ಕಾನೂನು ಹೋರಾಟಕ್ಕೆ ಸಿದ್ಧವಾದ ವಕ್ಫ್ ಬೋರ್ಡ್
Saturday, February 3, 2024
ಮಂಗಳೂರು: ಮಳಲಿ ಮಂದಿರ - ಮಸೀದಿ ವಿವಾದ ಪ್ರಕರಣದಲ್ಲಿ ವಕ್ಫ್ ಮಂಡಳಿ ಕಾನೂನು ಹೋರಾಟಕ್ಕೆ ಮುಂದಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಮಾತನಾಡಿ, ಮಳಲಿ ಪೇಟೆಯಲ್ಲಿರುವ ಮಸೀದಿ ಕಟ್ಟಡದ ಬಗ್ಗೆ ಎದ್ದಿರುವ ವಿವಾದಗಳ ವಿಚಾರ ನ್ಯಾಯಾಲಯದಲ್ಲಿದೆ. ಅಲ್ಲಿ ಜುಮಾ ಮಸೀದಿ ಇತ್ತು ಎನ್ನುವುದಕ್ಕೆ ದಾಖಲೆಗಳಿದೆ. ಈ ಮಸೀದಿ ವಕ್ಫ್ ಆಸ್ತಿಯ ವ್ಯಾಪ್ತಿಗೆ ಒಳಪಡುವುದರಿಂದ ಅದರ ಬಗ್ಗೆ ವಿವಾದಗಳಿದ್ದರೆ ವಕ್ಫ್ ಟ್ರಿಬ್ಯೂನಲ್ ನಲ್ಲಿ ವಿಚಾರಣೆ ನಡೆಯಲಿ ಎನ್ನುವುದು ನಮ್ಮ ವಾದವಾಗಿತ್ತು. ಈ ಬಗ್ಗೆ ಇದೀಗ ಹೈಕೋರ್ಟ್ ಅದನ್ನು ಜಿಲ್ಲಾ ನ್ಯಾಯಾಲಯದಲ್ಲಿಯೂ ವಿಚಾರಣೆ ಮಾಡಬಹುದು ಎಂದು ತೀರ್ಪು ನೀಡಿದೆ ಎಂದರು.
ಎಲ್ಲಿ ವಿಚಾರಣೆ ನಡೆದರೂ ನಮಗೆ ನ್ಯಾಯ ಸಿಗಬಹುದು ಎಂಬ ನಂಬಿಕೆ ನಮಗಿದೆ. ನಮ್ಮ ಬಳಿ ಇರುವ ದಾಖಲೆಗಳೊಂದಿಗೆ ವಿಚಾರಣೆಯನ್ನು ಎದುರಿಸುತ್ತೇವೆ. ರಾಣಿ ಅಬ್ಬಕ್ಕನ ಕಾಲದಲ್ಲೂ ಇಲ್ಲಿ ಮಸೀದಿ ಇತ್ತು ವಿದೇಶಿ ಪ್ರವಾಸಿಗರ ಬರಹ ಶ್ರುತಪಡಿಸುತ್ತದೆ. ಈ ಮಸೀದಿ ಬ್ರಿಷರ ಕಾಲದಲ್ಲಿಯೇ ಇತ್ತು. ಕಂದಾಯ ಇಲಾಖೆಯ ಹಳೆಯ ದಾಖಲೆಯಲ್ಲಿಯೂ ಮಸೀದಿ ಇತ್ತು ಎನ್ನುವುದಕ್ಕೆ ದಾಖಲೆಗಳಿದೆ. ಮಸೀದಿಯ ನಿರ್ವಹಣೆಗೆ ಪ್ರಾಚೀನ ಕಾಲದಲ್ಲಿ ದೀಪದ ಎಣ್ಣೆ ನೀಡಲಾಗುತ್ತಿತ್ತು. ಬ್ರಿಟಿಷ್ ಕಾಲದಲ್ಲಿ ಚಲಾವಣೆಯ ನಾಣ್ಯಗಳ ರೂಪದಲ್ಲಿ ತಸ್ತೀಕ್ ನೀಡಿರುವ ದಾಖಲೆಗಳಿವೆ. ಮಸೀದಿಯ ಆಸ್ತಿಯನ್ನು ವಕ್ಫ್ ನಲ್ಲಿ ನೋಂದಣಿ ಮಾಡುವಾಗ ತಹಶೀಲ್ದಾರರ ಮೂಲಕ ಪರಿಶೀಲನೆಯಾಗಿ, 2004ರಲ್ಲಿ ಸರ್ವೆ ನಡೆದು ದಾಖಲಾಗಿದೆ ಎಂದರು.
ಇತ್ತೀಚೆಗೆ ಕೆಲವರು ಮಳಲಿ ಮಸೀದಿಯಲ್ಲಿ ದೇವಾಲಯದ ಕುರುಹುಗಳಿವೆ ಎಂದು ವಿವಾದ ಮಾಡಿದ್ದಾರೆ. ಈ ವಿಚಾರವಾಗಿ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದರ ವಿರುದ್ಧ ಮಸೀದಿಯ ಆಡಳಿತ ಮಂಡಳಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಇದೀಗ ಹೈಕೋರ್ಟ್ ಜಿಲ್ಲಾ ನ್ಯಾಯಾಲಯದಲ್ಲಿಯೂ ವಿಚಾರಣೆ ಮಾಡಬಹುದು ಎಂದು ತೀರ್ಪು ನೀಡಿದೆ ಹೊರತಾಗಿ ಅದು ಮಸೀದಿಯ ಜಾಗ ಅಲ್ಲ ಎಂದು ತೀರ್ಪು ನೀಡಿಲ್ಲ . ಈ ಬಗ್ಗೆ ಗೊಂದಲ ಬೇಡ ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಸುವುದಾಗಿ ಎಂದು ಅವರು ಹೇಳಿದರು.