ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣದ ಆರೋಪಿಗಳ ಸ್ಪಷ್ಟ ಭಾವಚಿತ್ರ ಬಿಡುಗಡೆ - ಮುಸಾವಿರ್ ಹುಸೇಬ್, ಅಬ್ದುಲ್ ಮತೀನ್ ಮಾಹಿತಿ ನೀಡಿದವರಿಗೆ ತಲಾ 10ಲಕ್ಷ ಬಹುಮಾನ
Saturday, March 30, 2024
ಬೆಂಗಳೂರು: ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳೆಂದು ಹೇಳಲಾಗುತ್ತಿರುವ ಮುಸಾವಿರ್ ಹುಸೇಬ್ ಶಜೀಬ್ ಮತ್ತು ಅಬ್ದುಲ್ ಮತೀನ್ ತಾಹ ಎಂಬಿಬ್ಬರ ಬಗ್ಗೆ ಸುಳಿವು ಕೊಟ್ಟವರಿಗೆ ಎನ್ಐಎ ತಲಾ ಹತ್ತು ಲಕ್ಷ ರೂ. ಬಹುಮಾನ ಘೋಷಿಸಿದೆ.
ರಾಮೇಶ್ವರ ಕೆಫೆಯಲ್ಲಿ ಬ್ಲಾಸ್ಟ್ ಕೃತ್ಯಕ್ಕೆಂದು ಕಚ್ಚಾ ಸಾಮಗ್ರಿ ಪೂರೈಸಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮುಜಾಮುಲ್ ಶರೀಫ್ ಎಂಬಾತನನ್ನು ಮಾರ್ಚ್ 27ರಂದು ಅಧಿಕಾರಿಗಳು ಬಂಧಿಸಿದ್ದರು. ಇದರ ಬೆನ್ನಲ್ಲೇ ಪ್ರಮುಖ ಆರೋಪಗಳಿಬ್ಬರ ಪತ್ತೆಗಾಗಿ ಎನ್‌ಐಎ ಅಧಿಕಾರಿಗಳು ಸಾರ್ವಜನಿಕರ ಸಹಾಯ ಯಾಚಿಸಿದ್ದಾರೆ. ಆರೋಪಿಗಳಾದ ಅಬ್ದುಲ್ ಮತೀನ್ ಅಹ್ಮದ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಾಜಿಬ್ ಫೋಟೋ ಮತ್ತು ಅವರ ವಿವರಗಳನ್ನು ಬಿಡುಗಡೆ ಮಾಡಿ ಅವರ ಪತ್ತೆಗೆ ಸಹಾಯ ಕೋರಿದೆ.
ಮುಸಾವಿರ್ ಹುಸೇನ್ ಶಜೀಬ್ ಬಾಂಬ್ ಅನ್ನು ತಂದು ಕೆಫೆಯೊಳಗೆ ಇಟ್ಟಿರುವ ವ್ಯಕ್ತಿಯೆಂದು ಎನ್‌ಐಎ ಗುರುತಿಸಿದೆ. ಸಿಸಿಟಿವಿಯಲ್ಲಿ ದೊರೆತ ಮಾಹಿತಿಗಳು ಮತ್ತು ಆತ ಧರಿಸಿದ್ದ ಹ್ಯಾಟ್ ನೀಡಿರುವ ಮಾಹಿತಿಗಳನ್ನು ಆಧರಿಸಿ ಅದು ಮುಸಾವಿರ್ ಅನ್ನುವುದನ್ನು ಪತ್ತೆ ಮಾಡಿದ್ದಾರೆ. ಮುಸಾವಿರ್ ಜಿಮ್ ಬಾಡಿ ರೀತಿ ಸದೃಢ ದೇಹ ಹೊಂದಿದ್ದು 30 ವರ್ಷದವನಾಗಿದ್ದಾನೆ. 6.2 ಅಡಿ ಎತ್ತರವಿದ್ದು ಹೆಚ್ಚಾಗಿ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಧರಿಸುತ್ತಾನೆ. ಡಿಎಲ್ ಅಥವಾ ನಕಲಿ ಐಡಿಗಳನ್ನು ಇಡ್ಕೊಂಡಿದ್ದಾನೆ.
ಈತ ಬಾಯ್ಸ್ ಹಾಸ್ಟೆಲ್, ಪಿಜಿ ಹಾಗೂ ಕಡಿಮೆ ವೆಚ್ಚದ ಲಾಡ್ಜ್ ಗಳಲ್ಲಿ ಉಳಿದುಕೊಳ್ಳುವ ಸಾಧ್ಯತೆಯಿದೆ. ಈತನ ಬಗ್ಗೆ ಮಾಹಿತಿ ನೀಡಿರುವವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಇಬ್ಬರು ಆರೋಪಿಗಳು ಕೂಡ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವರು. ಎರಡು ದಿನಗಳ ಹಿಂದೆ ಎನ್‌ಐಎ ತಂಡ ಶಿವಮೊಗ್ಗದ ಅವರ ಮನೆ, ಶಾಪ್ ಗಳಿಗೆ ದಾಳಿ ನಡೆಸಿ ಮಹತ್ವದ ಸಾಕ್ಷಿಗಳನ್ನು ಕಲೆಹಾಕಿದ್ದರು. ಅಲ್ಲದೆ, ಮುಜಾಮಿಲ್ ಶರೀಫ್ ಎಂಬಾತನನ್ನು ಬಂಧಿಸಿದ್ದರು. ಆತನಿಂದ ಖಚಿತ ಮಾಹಿತಿಗಳನ್ನು ಪಡೆದು ಈಗ ಸ್ಪಷ್ಟ ಭಾವಚಿತ್ರಗಳನ್ನು ಎನ್‌ಐಎ ಬಿಡುಗಡೆ ಮಾಡಿದೆ.