ಪುತ್ತೂರು: ಬೆದರಿಕೆಯೊಡ್ಡಿ ವೈದ್ಯರಿಗೆ 16.50 ಲಕ್ಷ ಪಂಗನಾಮ ಹಾಕಿದ ಸೈಬರ್ ಖದೀಮ - ಪ್ರಕರಣ ದಾಖಲು
Sunday, March 31, 2024
ಪುತ್ತೂರು: ನಗರದ ವೈದ್ಯರೊಬ್ಬರಿಗೆ ಅಪರಿಚಿತನೊಬ್ಬ ಕರೆ ಮಾಡಿ ಬೆದರಿಕೆಯೊಡ್ಡಿ ಆನ್ಲೈನ್ ಮೂಲಕ ಬರೋಬ್ಬರಿ 16.50 ರೂ. ವಂಚಿಸಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರಿನ ಬೊಳುವಾರು ನಿವಾಸಿ ಡಾ.ಚಿದಂಬರ ಅಡಿಗ ಎಂಬವರು ಸೈಬರ್ ವಂಚನೆಗೊಳಗಾದ ವೈದ್ಯರು.
ಡಾ.ಚಿದಂಬರ ಅಡಿಗರಿಗೆ ಮಾ.28 ರಂದು ಕರೆ ಮಾಡಿದ ಅಪರಿಚಿತನೊಬ್ಬ ತಾನು ದೆಹಲಿಯ ಪೊಲೀಸ್ ಎಂದು ಪರಿಚಯಿಸಿದ್ದಾನೆ. ಬಳಿಕ ದೆಹಲಿಯಲ್ಲಿ ಮಾದಕವಸ್ತುವಿಗೆ ಸಂಬಂಧಿಸಿದಂತೆ, ಅಕ್ರಮ ಹಣ ಹೊಂದಿರುವ ಬಗ್ಗೆ ಹಾಗೂ ಮಾನವ ಕಳ್ಳ ಸಾಗಾಣಿಕ ಆರೋಪದ ಮೇಲೆ ತಮ್ಮ ಮೇಲೆ ಪ್ರಕರಣ ದಾಖಲಾಗಿ ಅರೆಸ್ಟ್ ಮಾಡಲು ಕೋರ್ಟ್ ನಿಂದ ವಾರಂಟ್ ಇದೆ. ನೀವು ದೆಹಲಿಯ ಸಿಬಿಐ ಕೋರ್ಟ್ ಗೆ ಹಾಜರಾಗಬೇಕು. ನಿಮಗೆ ಇಲ್ಲಿಗೆ ಬರಲು ಆಗದಿದ್ದರೆ ಆನ್ಲೈನ್ ಮೂಲಕ ಕೋರ್ಟ್ ಕೇಸ್ ನಡೆಸುತ್ತೇವೆ. ಆದರೆ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿದ್ದ ಹಣವನ್ನು ನಾನು ಹೇಳುವ ಖಾತೆಗೆ ವರ್ಗಾಯಿಸಬೇಕು. ನಿಮ್ಮ ಕೋರ್ಟ್ ಕೇಸ್ ಮುಗಿದ ಬಳಿಕ ನಿಮ್ಮ ಹಣ ವಾಪಸ್ ಸಿಗುತ್ತದೆ. ಇಲ್ಲದಿದ್ದರೆ ನಿಮ್ಮ ಮನೆಗೇ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ದೂರುದಾರರ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲಾಗಿರುವಂತೆ ಬಿಂಬಿಸುವ ಕೆಲವೊಂದು ದಾಖಲೆಗಳನ್ನು ಅಡಿಗರವರ ಮೊಬೈಲ್ ಫೋನ್ ನ ವಾಟ್ಸ್ ಆ್ಯಪ್ ಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ವೈದ್ಯರು ತಿಳಿಸಿದ್ದಾರೆ.
ಅಪರಿಚಿತನ ಮಾತಿಂದ ಗಾಬರಿಗೊಂಡ ಡಾ.ಚಿದಂಬರ ಅಡಿಗರವರು ಬ್ಯಾಂಕ್ ಖಾತೆಯಿಂದ, RTGS ಮೂಲಕ ಆತ ತಿಳಿಸಿದ ಬ್ಯಾಂಕ್ ಖಾತೆಗೆ 16,50,000ರೂ. ಹಣ ವರ್ಗಾವಣೆ ಮಾಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಅದೇ ಅಪರಿಚಿತ ಮತ್ತೆ ಕರೆಮಾಡಿ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ. ಇದರಿಂದ ವೈದ್ಯರು ಅನುಮಾನಗೊಂಡು ದೂರವಾಣಿ ಕರೆ ಕಡಿತಗೊಳಿಸಿದ್ದಾರೆ. ಈ ಬಗ್ಗೆ ತನ್ನ ಸ್ನೇಹಿತರೊಂದಿಗೆ ಈ ಬಗ್ಗೆ ತಿಳಿಸಿದಾಗ ಆನ್ ಲೈನ್ ಮೋಸದ ಬಗ್ಗೆ ತಿಳಿದುಬಂದಿದೆ. ಆದ್ದರಿಂದ ಪೊಲೀಸ್ ದೂರು ದಾಖಲು ಮಾಡಿದ್ದೇನೆ ಎಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.