ರಂಜಾನ್ ಉಪವಾಸ ಮುಗಿಸಿ ಪಾನಿಪುರಿ ಸೇವಿಸಿ 19ಮಕ್ಕಳು ಅಸ್ವಸ್ಥ
ದಾವಣಗೆರೆ: ರಂಜಾನ್ ಉಪವಾಸದ ಬಳಿಕ ಮಸೀದಿ ಮುಂಭಾಗ ಪಾನಿಪುರಿ ಸೇವಿಸಿ 19 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಹರಿಹರ ತಾಲೂಕಿನ ಮಲೆಬೆನ್ನೂರು ಪಟ್ಟಣದಲ್ಲಿ ನಡೆದಿದೆ.
ಪಾನಿಪುರಿ ಸೇವಿಸಿ ಅಸ್ವಸ್ಥಗೊಂಡ 19 ಮಕ್ಕಳಲ್ಲಿ ಒಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಈ ಮಗುವನ್ನು ಬಾಪುಜಿ ಆಸ್ಪತ್ರೆಯ ಐಸಿಯುವಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವು ಮಕ್ಕಳನ್ನು ಮಲೆಬೆನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.
ಮಲೆಬೆನ್ನೂರು ಪಟ್ಟಣದಲ್ಲಿ ಪಾನಿಪುರಿ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದು ಘಟನಾ ಸ್ಥಳಕ್ಕೆ ಹರಿಹರ ತಹಶೀಲ್ದಾರ್ ಗುರುಬಸಯ್ಯ, ಹರಿಹರ ಟಿಎಚ್ ಓ, ಮಲೆಬೆನ್ನೂರ ಪಟ್ಟಣದ ಮುಖ್ಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹರಿಹರ ತಹಶೀಲ್ದಾರ್ ಪಟ್ಟಣಕ್ಕೆ ಸರಬರಾಜು ಆಗುತ್ತಿರುವ ನೀರನ್ನು ಪರಿಶೀಲನೆಗೆಂದು ಕಳುಹಿಸಿದ್ದಾರೆ. 25ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಮನೆ ಮನೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಇಲ್ಲಿನ ಪಾನಿಪುರಿ ಇನ್ನಿತರ ಫಾಸ್ಟ್ ಫುಡ್ ಅಂಗಡಿಗಳ ಮೇಲೆ ನಿಗಾ ವಹಿಸಿದ್ದಾರೆ.