ನಾನ್‌ವೆಜ್ ಪ್ರಿಯರಿಗೆ ಶಾಕ್ ನೀಡಿದ ಚಿಕನ್!- ಐತಿಹಾಸಿಕ ದಾಖಲೆ ದರಕ್ಕೆ ಚಿಕನ್ ಸೇಲ್!
Friday, March 22, 2024
ನಾನ್‌ವೆಜ್ ಪ್ರಿಯರಿಗೆ ಶಾಕ್ ನೀಡಿದ ಚಿಕನ್!- ಐತಿಹಾಸಿಕ ದಾಖಲೆ ದರಕ್ಕೆ ಚಿಕನ್ ಸೇಲ್!
ರಾಜ್ಯದಲ್ಲಿ ಬರದ ಜೊತೆ ಬಿರು ಬಿಸಿಲಿನ ತಾಪ ಹೆಚ್ಚಾದ ಕಾರಣದಿಂದ ಕೋಳಿ ಉದ್ಯಮ ತತ್ತರಿಸಿ ಹೋಗಿದೆ. ಮಳೆ ಇಲ್ಲದ ಪರಿಣಾಮ ಕೋಳಿಯ ಆಹಾರಗಳಿಗೆ ಬಳಸುವ ಸೋಯಾ ಮೊದಲಾದ ಬೆಳೆಗಳ ಪ್ರಮಾಣ ಕಡಿಮೆಯಾಗಿ ಕೋಳಿ ಮಾಂಸದ ದರ ದಿನೇ ದಿನೇ ಏರಿಕೆ ಕಾಣತೊಡಗಿದೆ.
ಚಿಕನ್ ದರ ಏರಿಕೆಯಾದ ಪರಿಣಾಮ ಕೋಳಿ ಪ್ರಿಯರಿಗೆ ಶಾಕ್ ನೀಡಿದೆ. ಒಂದು ಕೆಜಿ ಕೋಳಿ ಮಾಂಸದ ದರ ರಾಜ್ಯದ ವಿವಿಧಡೆ 300 ರೂ. ತಲುಪಿದೆ. ರಾಜ್ಯದಲ್ಲಿ ಸುಮಾರು 40 ಸಾವಿರ ಕೋಳಿ ಸಾಕಾಣೆದಾರರಿದ್ದು, ಪ್ರತಿವಾರ 80 ಲಕ್ಷ ಕೋಳಿ ಉತ್ಪಾದನೆ ಮಾಡಲಾಗುತ್ತದೆ. ಸುಮಾರು 1.7 ಕೋಟಿ ಕೆಜಿ ಕೋಳಿ ಮಾಂಸ ಉತ್ಪಾದನೆ ಆಗುತ್ತದೆ. ಪ್ರತಿ ಕೆಜಿ ಕೋಳಿ ಉತ್ಪಾದನೆಗೆ ಈ ಹಿಂದೆ 60 ರಿಂದ 70 ರೂ. ವೆಚ್ಚ ಆಗುತ್ತಿತ್ತು. ಈಗ 100 ರೂಪಾಯಿವರೆಗೆ ಖರ್ಚಾಗುತ್ತಿದೆ.
ಮಾರುಕಟ್ಟೆಯಲ್ಲಿ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದು, ಬೇಡಿಕೆಯ ಪರಿಣಾಮ ದರ ಏರಿಕೆಯಾಗಿ 300 ರೂಪಾಯಿ ಗಡಿ ತಲುಪಿದೆ. ರಾಜ್ಯದಲ್ಲಿ ಶೇಕಡ 30ರಷ್ಟು ಕೋಳಿ ಶೆಡ್ ಗಳು ಖಾಲಿಯಾಗಿವೆ.
ಕೋಳಿ ಸಾಕಾಣೆದಾರರು, ಕಂಪನಿಗಳಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ. ವಿದ್ಯುತ್ ದರ ಕೂಡ ಹೆಚ್ಚಳ ಆಗಿದೆ. ಬಿಸಿಲು ಹೆಚ್ಚಾದ ಪರಿಣಾಮ ಕೋಳಿ ಮಾಂಸ ಉತ್ಪಾದನೆ ವಿಳಂಬವಾಗುತ್ತಿದೆ. ಹೊರ ರಾಜ್ಯಗಳಲ್ಲೂ ಕೂಡ ಕೋಳಿ ಉತ್ಪಾದನೆ ಕುಸಿತವಾಗಿ ಬೇಡಿಕೆ ಹೆಚ್ಚಾಗಿದೆ.
ಇದರ ಪರಿಣಾಮ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಚಿಕನ್ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.