ಮಂಗಳೂರು: ಲಕ್ಷದ್ವೀಪಕ್ಕೆ ಹೊರಟ ಬೋಟ್ ಸಮುದ್ರಪಾಲು - ಮೂರು ದಿನಗಳ ಕಾಲ ಅನ್ನ ನೀರಿಲ್ಲದೆ 8ಮಂದಿ ಪವಾಡ ಸದೃಶ ಪಾರು
Wednesday, March 20, 2024
ಮಂಗಳೂರು: ಲಕ್ಷದ್ವೀಪಕ್ಕೆ ಹೊರಟಿದ್ದ ಸರಕು ತುಂಬಿದ ಹಡಗು ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಈ ಬೋಟ್ ನಲ್ಲಿದ್ದ 8ಮಂದಿ ಮೂರು ದಿನಗಳ ಕಾಲ ಅನ್ನ - ನೀರಿಲ್ಲದೆ ಪವಾಡ ಸದೃಶ ಪಾರಾಗಿದ್ದಾರೆ.
ಮಾ.12ರಂದು ಮಂಗಳೂರಿನಿಂದ ಜಲ್ಲಿ, ಸಿಮೆಂಟ್ ಇನ್ನಿತರ ಸಾಮಗ್ರಿ ಹೇರಿಕೊಂಡು ಲಕ್ಷದ್ವೀಪದತ್ತ ತೆರಳಿದ್ದ ತಮಿಳುನಾಡು ಮೂಲದ ಎಂಎಸ್ ವಿ ವರದರಾಜ ಬೋಟ್ ಲಕ್ಷದ್ವೀಪದ ಅಂದ್ರೋತ್ ಮೂಲಕ ಅಗತಿ ದ್ವೀಪಕ್ಕೆ ಹೊರಟಿತ್ತು. ಮಾ.13ರಂದು ಅಂದ್ರೋತ್ ದ್ವೀಪದಲ್ಲಿ ಅರ್ಧ ಸಾಮಾಗ್ರಿ ಖಾಲಿ ಮಾಡಿ ಅಗತಿ ದ್ವೀಪದತ್ತ ಸಾಗಾಟ ಮಾಡಿತ್ತು. ಮರುದಿನ ಬೆಳಗ್ಗೆ ಹಡಗಿನ ಇಂಜಿನ್ ನಲ್ಲಿ ದೋಷ ಕಂಡುಬಂದಿತ್ತು. ಕ್ಯಾಪ್ಟನ್ ಹಾಗೂ ಸಿಬ್ಬಂದಿ ಹಡಗಿನ ದುರಸ್ತಿಗೆ ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಈ ವೇಳೆ ನೀರು ತುಂಬಲು ಆರಂಭವಾಗಿ ಹಡಗು ಮುಳುಗಲಾರಂಭಿಸಿದೆ.
ಸಣ್ಣ ಬೋಟ್ ಮೂಲಕ ಹಾರಿ ಕ್ಯಾಪ್ಟನ್ ಮತ್ತು ಸಿಬ್ಬಂದಿ ಸಮುದ್ರಕ್ಕೆ ಹಾರಿದ್ದರು. ಮಾರ್ಚ್ 15 -17ರವರೆಗೆ ಅವರ ಹುಡುಕಾಟ ನಡೆಸಿದರೂ ಯಾರೂ ಪತ್ತೆಯಾಗಿರಲಿಲ್ಲ. ಮಾ.18ರಂದು ಲಕ್ಷದ್ವೀಪದ ಕಲ್ತೇನಿ ದ್ವೀಪದ ಮೀನುಗಾರರಿಗೆ ದೂರದ ಸಮುದ್ರದಲ್ಲಿ ಪಾತಿಯಲ್ಲಿ ಎಂಟು ಮಂದಿ ತೇಲುತ್ತ ಸಹಾಯಕ್ಕಾಗಿ ಯಾಚನೆ ಮಾಡುತ್ತಿದ್ದರು. ತಕ್ಷಣ ಈ ಮೀನುಗಾರರು ಅವರನ್ನು ರಕ್ಷಣೆ ಮಾಡಿದ್ದಾರೆ. ಕೋಸ್ಟ್ ಗಾರ್ಡ್ ಸಿಬ್ಬಂದಿ ಅವರೆಲ್ಲರನ್ನೂ ಸ್ಪೀಡ್ ಬೋಟ್ ಮೂಲಕ ಕೇರಳದ ಕೊಚ್ಚಿಗೆ ಕರೆತಂದಿಂದ್ದಾರೆ.