-->
ಕಡಬ: ದನ ಸಾಗಾಟದ ಕಾರು ಡಿಕ್ಕಿಯಾಗಿ ಪಾದಚಾರಿ ಸಾವು - ತಡರಾತ್ರಿ ಹೆದ್ದಾರಿ ತಡೆ ನಡೆಸಿದ ಹಿಂದೂ ಕಾರ್ಯಕರ್ತರು

ಕಡಬ: ದನ ಸಾಗಾಟದ ಕಾರು ಡಿಕ್ಕಿಯಾಗಿ ಪಾದಚಾರಿ ಸಾವು - ತಡರಾತ್ರಿ ಹೆದ್ದಾರಿ ತಡೆ ನಡೆಸಿದ ಹಿಂದೂ ಕಾರ್ಯಕರ್ತರು


ಕಡಬ: ಅಕ್ರಮವಾಗಿ ದನವನ್ನು ಸಾಗಾಟ ಮಾಡುತ್ತಿದ್ದ ಮಾರುತಿ 800 ಕಾರೊಂದು ಢಿಕ್ಕಿಯಾದ ಪರಿಣಾಮ ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಡಬದ ಮರ್ಧಾಳದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮರ್ಧಾಳ ನೆಕ್ಕಿತ್ತಡ್ಕ ಸಮೀಪದ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಮೃತಪಟ್ಟ ದುರ್ದೈವಿ.

ವಿಠಲ ರೈಯವರು ಶನಿವಾರ ರಾತ್ರಿ ತನ್ನ ಕಾರನ್ನು ಮರ್ಧಾಳದಲ್ಲಿ ಪಾರ್ಕ್ ಮಾಡಿ ರಸ್ತೆ ದಾಟುತ್ತಿದ್ದರು. ಈ ವೇಳೆ ಸುಬ್ರಹ್ಮಣ್ಯದಿಂದ ಕಡಬ ಕಡೆಗೆ ಧಾವಿಸಿ ಬರುತ್ತಿದ್ದ ಮಾರುತಿ 800 ಕಾರೊಂದು ಇವರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಕಾರು ಢಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡ ವಿಠಲ ರೈಯವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಕಾರು ಚಾಲಕ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಒಳರಸ್ತೆಯಲ್ಲಿ ಮನೆಯೊಂದರ ಮುಂಭಾಗದಲ್ಲಿ ನಿಲ್ಲಿಸಿ ದನವನ್ನು ಪಕ್ಕದ ತೋಟದಲ್ಲಿ ಕಟ್ಟಿ ಪರಾರಿಯಾಗಿದ್ದನು. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು‌.


ಈ ವಿಚಾರ ತಿಳಿದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ತಡರಾತ್ರಿ ಕಡಬದಲ್ಲಿ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದಲ್ಲದೆ, ಎಸ್ಪಿ ಸ್ಥಳಕ್ಕಾಗಮಿಸುವಂತೆ ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಹಿಂದೂ ಮುಖಂಡ ಅರುಣ್ ಪುತ್ತಿಲ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಮೊದಲಾದವರು ಭೇಟಿ ನೀಡಿ ಪ್ರತಿಭಟನಾಕಾರರಿಗೆ ಸಾಥ್ ನೀಡಿದ್ದರು.

ರಾತ್ರಿ ವೇಳೆಗೆ ಸ್ಥಳಕ್ಕಾಗಮಿಸಿದ ಎಸ್ಪಿ ಸಿ.ಬಿ.ರಿಷ್ಯಂತ್ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಗಿತ್ತು. ಪೊಲೀಸರಿಗೆ ಆರೋಪಿಗಳ ಬಂಧನಕ್ಕೆ ರವಿವಾರ ಮಧ್ಯಾಹ್ನದ ಗಡುವು ನೀಡಲಾಗಿತ್ತು. ಆದರೆ ರವಿವಾರ ಬೆಳಗ್ಗಿನ ಜಾವ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

Ads on article

Advertise in articles 1

advertising articles 2

Advertise under the article