ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವ ಉದ್ದೇಶ ದಿಂದ ಆರಂಭವಾದ ಅಕ್ಕ ಕೆಫೆ
Wednesday, March 13, 2024
ಬೆಂಗಳೂರು: ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಷ್ಟ್ರೀಯ ಜೀವನೋಪಾಯ ಮಿಷನ್ ಅಡಿಯಲ್ಲಿ ಮೊದಲ ಅಕ್ಕ ಕೆಫೆ ಆರಂಭವಾಗಿದೆ.
ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಅಕ್ಕ ಕೆಫೆ ಕಾರ್ಯರೂಪಕ್ಕೆ ಬಂದಿದೆ. ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 8 ರಂದು ಕೆಂಪೇಗೌಡ ರಸ್ತೆಯ ಗಾಂಧಿ ನಗರದಲ್ಲಿ ಒಲವಿನ ಊಟ ಎಂಬ ಟ್ಯಾಗ್‌ನಡಿ ಅಕ್ಕ ಕೆಫೆಯನ್ನು ತೆರಯಲಾಗಿದೆ.
ಕರ್ನಾಟಕದಾದ್ಯಂತ 200ಕ್ಕೂ ಹೆಚ್ಚು ಅಕ್ಕ ಕೆಫೆಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದು, ಈ ಮೂಲಕ ಮಹಿಳಾ ಉದ್ಯಮಿಗಳ ಸಬಲೀಕರಣಕ್ಕೆ ಮುನ್ನುಡಿ ಬರೆಯಲಾಗಿದೆ.
ಅಕ್ಕ ಕೆಫೆ ಐಡಿಯಾದ ಉದಯ ಹೇಗೆ
ಮಹಿಳಾ ಸ್ವಸಹಾಯ ಸಂಘವು ಕಳೆದ ಆರು ವರ್ಷಗಳಿಂದ ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಮಹಿಳೆಯರಿಗೆ ಬೆಂಬಲ ನೀಡುತ್ತಾ ಬಂದಿದೆ. ಈ ಮೂಲಕ ಯಾವುದೇ ಸರ್ಕಾರಿ ಕಾರ್ಯಕ್ರಮವಾಗಲಿ ಮಹಿಳಾ ಸ್ವಸಹಾಯ ಸಂಘದಿಂದಲೇ ತಿಂಡಿ ಮತ್ತು ಪಾನೀಯಗಳನ್ನು ಒದಗಿಸುತ್ತಿದೆ. ಇದನ್ನೂ ಗಮನದಲ್ಲಿಟ್ಟುಕೊಂಡು ಸಂಸ್ಥೆಯು ಮಹಿಳೆಯರಿಂದಲೇ ನಡೆಸಲ್ಪಡುವ ಕೆಫೆಯನ್ನು ತೆರೆಯಲು ಯೋಜಿಸಿತು ಎಂದು ಅಕ್ಕ ಕೆಫೆಯ ಮಾಲೀಕರೊಬ್ಬರು ತಿಳಿಸಿದ್ದಾರೆ.
ಅಕ್ಕ ಕೆಫೆ ವೇಳಾ ಪಟ್ಟಿ ಹೇಗೆ
ಸ್ವಸಹಾಯ ಗುಂಪಿಗೆ ಸೇರಿದ 12 ಮಹಿಳೆಯರ ತಂಡದಿಂದ ಈ ಕೆಫೆಯನ್ನು ನಡೆಸಲಾಗುತ್ತದೆ. ಅಕ್ಕ ಕೆಫೆಯು ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ ವಾರವಿಡೀ ಕಾರ್ಯನಿರ್ವಹಿಸಲಿದೆ. ಅಕ್ಕ ಕೆಫೆ ಕಾರ್ಯಕ್ರಮದಡಿ ಆರೋಗ್ಯಕರ, ಸ್ವಾದಿಷ್ಟವಾದ ಆಹಾರ ಲಭ್ಯವಿರಲಿದೆ. ಶುಚಿ-ರುಚಿಯ ಜತೆಗೆ ಕೈಗೆಟುಕುವ ದರದಲ್ಲಿ ಸ್ಥಳೀಯ ಆಹಾರವನ್ನು ಪೂರೈಸಲಾಗುತ್ತದೆ.
- ಪ್ರವಾಸಿ ತಾಣ, ಆಸ್ಪತ್ರೆಯಲ್ಲೂ ಅಕ್ಕ ಸೇವೆ
ರಾಜ್ಯಾದ್ಯಂತ ಅಕ್ಕ ಕೆಫೆಯನ್ನು ವಿಸ್ತರಿಸಲು ತೀರ್ಮಾನ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅಕ್ಕ ಕೆಫೆಗಳು ಪ್ರವಾಸಿ ತಾಣ, ಸರ್ಕಾರಿ ಕಚೇರಿ ಹಾಗೂ ಆಸ್ಪತ್ರೆ ಆವರಣ ಸೇರಿ ಜನನಿಬಿಡ ಪ್ರದೇಶದಲ್ಲೂ ತೆರಯಲಿದೆ.