ಉಳ್ಳಾಲ: ಕೊಂಡಾಣ ಕ್ಷೇತ್ರದ ನಿರ್ಮಾಣ ಹಂತದ ನೂತನ ಭಂಡಾರಮನೆ ನೆಲಸಮ - ಗುತ್ತಿನ ಗುರಿಕಾರರ ಮುತ್ತಣ್ಣ ಶೆಟ್ಟಿ ಸೇರಿದಂತೆ ಮೂವರು ಅರೆಸ್ಟ್
Sunday, March 3, 2024
ಉಳ್ಳಾಲ: ಕೋಟೆಕಾರು ಗ್ರಾಮದ ಪ್ರಸಿದ್ಧ ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ, ಬಂಟ, ವೈದ್ಯನಾಥ ಪರಿವಾರ ದೈವಸ್ಥಾನಕ್ಕೆ ತಾಗಿಕೊಂಡೇ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಭಂಡಾರಮನೆಯ ನಿರ್ಮಾಣ ಹಂತದ ಕಟ್ಟಡವನ್ನು ಕಿಡಿಗೇಡಿಗಳು ರವಿವಾರ ಬೆಳಗ್ಗೆ ಜೆಸಿಬಿಯಲ್ಲಿ ನೆಲಸಮಗೊಳಿಸಿ ವಿಕೃತಿ ಮೆರೆದಿದ್ದರು. ಕೃತ್ಯದ ಹಿಂದೆ ಗುತ್ತಿನ ಗುರಿಕಾರ ಮುತ್ತಣ್ಣ ಶೆಟ್ಟಿ ಬಣದ ಕೈವಾಡವಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಣ್ಣ ಶೆಟ್ಟಿ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೊಂಡಾಣ ಕ್ಷೇತ್ರದ ಭಂಡಾರ ಮನೆ ಖಾಸಗಿ ಗುತ್ತು ಮನೆತನದ ಒಡೆತನದಲ್ಲಿದೆ. ಈ ಭಂಡಾರ ಮನೆಯಲ್ಲಿ ಕ್ಷೇತ್ರದ ದೈವಗಳ 15 ಕೋಟಿಗೂ ಮಿಕ್ಕಿ ಬೆಳೆಬಾಳುವ ಒಡವೆ, ದೈವದ ಪರಿಕರಗಳಿವೆ. ಈ ಭಂಡಾರಮನೆಯನ್ನು ಮುಜರಾಯಿ ಇಲಾಖೆಗೆ ಸೇರಿಸಲು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾರೆಮಾರ್ ಶತಾಯಗತಾಯ ಪ್ರಯತ್ನಿಸಿದ್ದರು. ಆದರೆ ಇದಕ್ಕೆ ಭಂಡಾರಮನೆಯವರು ಸಮ್ಮತಿಸರಿರಲಿಲ್ಲ.
ಆ ಹಿನ್ನಲೆಯಲ್ಲಿ ಕ್ಷೇತ್ರದ ದೈವಗಳಿಗೆ ಬೇರೆಯೇ ಭಂಡಾರಮನೆ ನಿರ್ಮಾಣವಾಗಬೇಕೆಂದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿತ್ತು.
ಆದ್ದರಿಂದ ಕ್ಷೇತ್ರಕ್ಕೆ ತಾಗಿಕೊಂಡ ಜಮೀನನ್ನು ವ್ಯವಸ್ಥಾಪನಾ ಸಮಿತಿ ಖರೀದಿಸಿ ಆ ಜಾಗದಲ್ಲಿ ಜ.8ರಂದು ಕೃಷ್ಣ ಶೆಟ್ಟಿ ತಾಮಾರ್ ಮುಂದಾಳುತ್ವದಲ್ಲಿ ನೂತನ ಭಂಡಾರ ಮನೆಗೆ ಶಿಲಾನ್ಯಾಸ ಮಾಡಲಾಗಿತ್ತು. ದಾನಿಗಳ ದೇಣಿಗೆಯಿಂದ ಭಂಡಾರ ಮನೆಯ 80 ಶೇಕಡಾ ಕಾಮಗಾರಿ ಸಂಪೂರ್ಣಗೊಂಡಿತ್ತು. ಈಗಿನ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಅವಧಿ ಮುಗಿದು, ಕೃಷ್ಣ ಶೆಟ್ಟಿ ತಾಮಾರ್ ಅವರು ಎರಡು ದಿನಗಳ ಹಿಂದೆಯಷ್ಟೇ ಅಧಿಕಾರವನ್ನು ಇಲಾಖೆಗೆ ಹಸ್ತಾಂತರಿಸಿದ್ದರು. ಆದರೆ ರವಿವಾರ ಬೆಳಗ್ಗೆ ಕಿಡಿಗೇಡಿಗಳು ಜೆಸಿಬಿಯಿಂದ ಏಕಾಏಕಿ ನಿರ್ಮಾಣ ಹಂತದ ಭಂಡಾರಮನೆಯನ್ನು ನೆಲಸಮ ಮಾಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು, ಕೋಟೆಕಾರು ಪಪಂ ಮುಖ್ಯಾಧಿಕಾರಿ ಆನಂದ್, ಎಸಿಪಿ ಧನ್ಯಾ ನಾಯಕ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗುತ್ತಿನ ಗುರಿಕಾರ ಮುತ್ತಣ್ಣ ಶೆಟ್ಟಿ ಸೇರಿದಂತೆ ಧೀರಜ್ ಹಾಗೂ ಶಿವರಾಜ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.