ಹತ್ತು ಅಡಿ ಆಳದ ಸಂಪ್ ಗೆ ಬಿದ್ದ ಮಗು: ಸಮಯ ಪ್ರಜ್ಞೆ ಮೆರೆದು ಪ್ರಾಣ ಉಳಿಸಿದ ಟ್ರಾಫಿಕ್ ಸಬ್ ಇನ್‌ಸ್ಪೆಕ್ಟರ್
Thursday, March 7, 2024
ಬೆಂಗಳೂರು: ಆಟವಾಡುತ್ತಿರುವಾಗ ಆಯತಪ್ಪಿ ನೀರಿನ ಸಂಪ್‌ಗೆ ಬಿದ್ದ ಎರಡೂವರೆ ವರ್ಷದ ಶಿಶುವನ್ನು ಟ್ರಾಫಿಕ್ ಸಬ್ ಇನ್‌ಸ್ಪೆಕ್ಟರ್ ರಕ್ಷಿಸಿ ಜೀವಾಪಾಯದಿಂದ ಪಾರು ಮಾಡಿರುವ ಘಟನೆ ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಇಎಲ್ ಲೇಔಟ್‌ನ ಮನೆಯಲ್ಲಿ ನಡೆದಿದೆ.
ಮನೆಯಲ್ಲಿ ಆಟವಾಡುತ್ತಿರುವಾಗ ಈ ಮಗು 10 ಅಡಿಯ ನೀರಿನ ಸಂಪ್‌ಗೆ ಬಿದ್ದಿದೆ. ಮಗು ಬೀಳುತ್ತಿದ್ದಂತೆ ಚೀರಾಡಿದೆ. ಇದೇ ಸಂದರ್ಭ ಅದೇ ದಾರಿಯಲ್ಲಿ ಹೋಗುತ್ತಿದ್ದ ಬ್ಯಾಟರಾಯನಪುರ ಸಂಚಾರ ಠಾಣೆಯ ಪಿಎಸ್‌ಐ ನಾಗರಾಜ್ ಅವರಿಗೆ ಚೀರಾಟದ ಶಬ್ದ ಕೇಳಿದೆ. ಆದ್ದರಿಂದ ಅವರು ಸಂಪ್ ಬಳಿ ಬಂದಿದ್ದಾರೆ. ಮಗು ಬಿದ್ದಿರುವುದನ್ನು ಗಮನಿಸಿದ ಅವರು ಸಮವಸ್ತ್ರದಲ್ಲೇ ನೀರಿನ ಸಂಪ್‌ಗೆ ಇಳಿದು ಮಗುವನ್ನು ರಕ್ಷಣೆ ಮಾಡಿದ್ದಾರೆ.
ಕೊಂಚ ತಡವಾಗಿದ್ದರೂ ಮಗುವಿನ ಪ್ರಾಣಕ್ಕೆ ಅಪಾಯವಾಗುತಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆದ ಮಗು ಚೇತರಿಸಿಕೊಳ್ಳುತ್ತಿದೆ. ಮಗುವನ್ನು ರಕ್ಷಿಸಿದ್ದ ಟ್ರಾಫಿಕ್ ಪಿಎಸ್‌ಐಗೆ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.