ಮಂಗಳೂರು: ವೃದ್ಧ ದಂಪತಿಗೆ ಅಮಾನುಷವಾಗಿ ಹಲ್ಲೆ - ಧರ್ಮಗುರು ಹುದ್ದೆಯಿಂದಲೇ ಪಾದ್ರಿಯನ್ನು ಕಿತ್ತುಹಾಕಿದ ಮಂಗಳೂರು ಡಯಾಸಿಸ್
Sunday, March 3, 2024
ಮಂಗಳೂರು: ವೃದ್ಧ ದಂಪತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ವಿಟ್ಲ ಪೆರಿಯಾಲ್ಡಡ್ಕ ಕ್ರೈಸ್ಟ್ ಕಿಂಗ್ ಚರ್ಚ್ ಪಾದ್ರಿ ಫಾ.ನೆಲ್ಸನ್ ಒಲಿವೆರಾನನ್ನು ಮಂಗಳೂರು ಕ್ಯಾಥೊಲಿಕ್ ಡಯಾಸಿಸ್ ಧರ್ಮಗುರು ಹುದ್ದೆಯಿಂದಲೇ ವಜಾಗೊಳಿಸಿದೆ.
ಪಾದ್ರಿ ಫಾ.ನೆಲ್ಸನ್ ಒಲಿವೆರಾ ವೃದ್ಧ ದಂಪತಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ವೀಡಿಯೊ ಶನಿವಾರ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ ಆತನನ್ನು ಪಾದ್ರಿ ಹುದ್ದೆಯಿಂದಲೇ ವಜಾಗೊಳಿಸಿದೆ. ''ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿದ್ದು, ಕಾನೂನು ರೀತಿ ತನಿಖೆಗೆ ಪೊಲೀಸರೊಂದಿಗೆ ಸಹಕರಿಸುತ್ತೇವೆ. ನೈಜ ವಿಚಾರ ತಿಳಿದುಕೊಳ್ಳಲು ಫಾ.ನೆಲ್ಸನ್ ಒಲಿವೆರಾನನ್ನು ಪಾದ್ರಿ ಹುದ್ದೆಯಿಂದಲೇ ತೆರವುಗೊಳಿಸುತ್ತೇವೆ" ಎಂದು ಡಯಾಸಿಸ್ ಪರವಾಗಿ ಫಾ.ಜೆ.ಬಿ.ಸಲ್ದಾನ ಮತ್ತು ರೊನಾಲ್ಡ್ ಕ್ಯಾಸ್ಟಲಿನೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ವೀಡಿಯೊ ವೈರಲ್ ಆಗಿರುವ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಕೃತ್ಯದಲ್ಲಿದ್ದವರು ಒಂದೇ ಸಮುದಾಯದವರು. ಸಾರ್ವಜನಿಕರು ವದಂತಿಗೆ ಕಿವಿಕೊಡಬಾರದೆಂದು ಪೊಲೀಸರು ಮನವಿ ಮಾಡಿದ್ದಾರೆ.