ವಿವಾದಕ್ಕೆ ಕಾರಣವಾಯ್ತು ಬ್ರಿಟನ್ ರಾಜಕುಮಾರಿ ಹಂಚಿಕೊಂಡ ಫೋಟೊ- ಕ್ಷಮೆಯಾಚಿಸಿದ ಕೇಟ್ ಮಿಡಲ್ಟನ್
Tuesday, March 12, 2024
ಬ್ರಿಟನ್: ಬ್ರಿಟನ್ ರಾಜಕುಮಾರಿ ಕೇಟ್ ಮಿಡಲ್ಟನ್ ಇತ್ತೀಚೆಗೆ ಹಂಚಿಕೊಂಡಿರುವ ಫೋಟೊ ರಾಜ ಮನೆತನವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸದ್ಯ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಚಾರವಾಗಿದೆ.
ಏಕೆಂದರೆ ಕೇಟ್ ಶೇರ್ ಮಾಡಿರುವ ಫೋಟೋ ರಿಯಲ್ ಅಲ್ಲ, ಎಡಿಟ್ ಮಾಡಿರುವುದು ಎಂದು ಜನತೆ ನಂಬಿದ್ದಾರೆ. ಈ ಗೊಂದಲಕ್ಕೆ ಕೇಟ್ ಕೂಡ ಕ್ಷಮೆ ಯಾಚಿಸಿದ್ದು, ಫೋಟೋ ಎಡಿಟ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಈ ಫೋಟೋವನ್ನು ಕೆನ್ಸಿಂಗ್ಟನ್ ಪ್ಯಾಲೇಸ್ ಬಿಡುಗಡೆ ಮಾಡಿತ್ತು. ಇದರಲ್ಲಿ ಕೇಟ್ ತಮ್ಮ ಮೂವರು ಮಕ್ಕಳೊಂದಿಗೆ ಕುಳಿತಿರುವುದನ್ನು ಕಾಣಬಹುದು. ಈ ವಿವಾದ ಎಷ್ಟರ ಮಟ್ಟಿಗೆ ಬೆಳೆಯಿತು ಎಂದರೆ ಅನೇಕ ಸುದ್ದಿ ಸಂಸ್ಥೆಗಳು ತಮ್ಮ ಪ್ಲಾಟ್‌ಫಾರ್ಮ್‌ನಿಂದ ಕೇಟ್ ಅವರ ಫೋಟೋವನ್ನು ತೆಗೆದುಹಾಕಬೇಕಾಯಿತು.
ರಾಜಕುಮಾರಿ ಕೇಟ್ ಜನವರಿಯಲ್ಲಿ ಹೊಟ್ಟೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಆಕೆಯ ಮೊದಲ ಫೋಟೋ ಮಾರ್ಚ್ 10 ರಂದು ರಿವೀಲ್ ಮಾಡಲಾಯಿತು. ಈ ಫೋಟೋವನ್ನು ಅವರ ಪತಿ ತೆಗೆದಿದ್ದಾರೆ ಎಂದು ವರದಿಯಾಗಿದೆ. ಈಗ ಫೋಟೊದ ಕ್ರಾಪಿಂಗ್ ಬಗ್ಗೆ ವಿವಾದ ಶುರುವಾಗಿದೆ.
ಏಕೆಂದರೆ ಆಕೆಯ ಕೈಯಲ್ಲಿ ನಿಶ್ಚಿತಾರ್ಥದ ಉಂಗುರವಿಲ್ಲ ಎಂದು ಹೇಳಲಾಗುತ್ತಿದೆ. ಕೇಟ್ ಅವರ ಪುತ್ರಿ ಕಾರ್ಡಿಜನ್ ನ ತೋಳಿನ ಭಾಗವು ಸರಿಯಾಗಿ ಕಾಣಿಸುತ್ತಿಲ್ಲ ಎಂದು ಹೇಳಲಾಗಿದೆ. ಅದಕ್ಕಾಗಿಯೇ ಹೆಚ್ಚಿನ ಸುದ್ದಿ ಸಂಸ್ಥೆಗಳು ಈ ಫೋಟೋವನ್ನು ತಮ್ಮ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಿವೆ. ಈ ಫೋಟೋವನ್ನು ತಾಯಂದಿರ ದಿನದಂದು ಬ್ರಿಟನ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
ಫೋಟೋದಲ್ಲಿ ಕೇಟ್ ಮಿಡಲ್ಟನ್ ತನ್ನ ಮೂವರು ಮಕ್ಕಳಾದ ಪ್ರಿನ್ಸ್ ಜಾರ್ಜ್, ಪ್ರಿನ್ಸೆಸ್ ಷಾರ್ಲೆಟ್ ಮತ್ತು ಪ್ರಿನ್ಸ್ ಲೂಯಿಸ್ ಅವರೊಂದಿಗೆ ನಗುತ್ತಿರುವುದನ್ನು ಕಾಣಬಹುದು. ಸಾಮಾಜಿಕ ಜಾಲತಾಣದಲ್ಲಿ ಅವರು “ಹಲವು ಹವ್ಯಾಸಿ ಛಾಯಾಗ್ರಾಹಕರಂತೆ, ನಾನು ಕೆಲವೊಮ್ಮೆ ಎಡಿಟ್‌ನಲ್ಲಿ ಪ್ರಯೋಗ ಮಾಡುತ್ತೇನೆ. ನಾವು ನಿನ್ನೆ ಹಂಚಿಕೊಂಡ ಕುಟುಂಬದ ಫೋಟೋಗೆ ಸಂಬಂಧಿಸಿದಂತೆ ಗೊಂದಲ ಉಂಟಾದಲ್ಲಿ ನಾನು ಕ್ಷಮೆಯಾಚಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ.
ತಾಯಂದಿರ ದಿನಕ್ಕಾಗಿ ರಾಜಮನೆತನವು ಫಾರ್ಮಲ್ ಫ್ಯಾಮಿಲಿ ಫೋಟೋವನ್ನು ಪ್ರಸ್ತುತಪಡಿಸಲು ಬಯಸಿದ್ದರಿಂದ ಪ್ರಿನ್ಸ್ ವೇಲ್ಸ್ ಅವರು ಈ ಫೋಟೋವನ್ನು ಹವ್ಯಾಸಕ್ಕಾಗಿ ತೆಗೆದಿದ್ದಾರೆ ಎಂದು ಅರಮನೆ ಮೂಲಗಳು ಸೂಚಿಸಿವೆ.