ಮೂರು ಲಕ್ಷ ಲಂಚಕ್ಕೆ ಬೇಡಿಕೆ: ಮನೆಯಲ್ಲೇ ಲೋಕಾಯುಕ್ತ ಬಲೆಯಲ್ಲಿ ಲಾಕ್ ಆದ ಮಹಿಳಾ ತಹಶೀಲ್ದಾರ್
ತುಮಕೂರು: ಲಂಚಕ್ಕೆ ಬೇಡಿಕೆಯಿಟ್ಟು, ಮನೆಯಲ್ಲೇ ಮೂರು ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಮಹಿಳಾ ತಹಶೀಲ್ದಾರ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಿಕ್ಕನಾಯಕನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಗೀತಾ ಎಂಬವರು ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್.
ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದ ರೈತ ಮಲ್ಲಿಕಾರ್ಜುನ್ ಎಂಬವರಿಗೆ ಸೇರಿದ 33 ಗುಂಟೆ ಜಮೀನನ್ನು ಭೂ ಪರಿವರ್ತನೆ ಮಾಡಿಕೊಡಲು ತಹಶೀಲ್ದಾರ್ ಗೀತಾ 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅದರಂತೆ ಬುಧವಾರ ಬೆಳಗ್ಗೆ 20 ಸಾವಿರ ರೂ. ಪಡೆದಿದ್ದರು. ಸಂಜೆ ವೇಳೆ ಮತ್ತೆ 30 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಮನೆಯಲ್ಲಿಯೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತುಮಕೂರು ಲೋಕಾಯುಕ್ತ ಡಿವೈಎಸ್ ಪಿ ರಾಮಕೃಷ್ಣ ಹಾಗೂ ಉಮಾಶಂಕರ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆ ವೇಳೆ ಗೀತಾ ಲಾಕ್ ಆಗಿದ್ದಾರೆ. ಸದ್ಯ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಗೀತಾ ರವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆದಿದೆ.