ಗುಟ್ಟಾಗಿ ದೇವಸ್ಥಾನದಲ್ಲಿ ಮದುವೆಯಾದ ನಟ ಸಿದ್ದಾರ್ಥ್ - ನಟಿ ಅದಿತಿ ರಾವ್ ಹೈದರಿ
Thursday, March 28, 2024
ಬೆಂಗಳೂರು: ಪ್ರಖ್ಯಾತ ನಟ ಸಿದ್ಧಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಮತ್ತು ಕಾಲಗಳಿಂದ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಿದ್ದರು. ಈ ಜೋಡಿ ಇದೀಗ ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರೀರಂಗಪುರದಲ್ಲಿರುವ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ಮದುವೆಯಾಗಿದೆ ಎಂದು ವರದಿಯಾಗಿದೆ. ಇಬ್ಬರಿಗೂ ಇದು ಎರಡನೇ ವಿವಾಹ ಎಂಬುದು ವಿಶೇಷ.
ಯಾರಿಗೂ ಗೊತ್ತಿಲ್ಲದಂತೆ ಈ ಜೋಡಿ ರಹಸ್ಯವಾಗಿ ಮದುವೆಯಾಗಿದೆ. ಇದೀಗ ಈ ಸುದ್ದಿ ವೈರಲ್ ಆಗಿದೆ. ಆದರೆ ಮದುವೆಗೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೋಗಳು ಹೊರಬಂದಿಲ್ಲ. ಎರಡೂ ಕುಟುಂಬದ ಹಿರಿಯರು, ಹತ್ತಿರದ ಬಂಧುಗಳು, ಸ್ನೇಹಿತರ ಸಮ್ಮುಖದಲ್ಲಿ ಇವರ ಮದುವೆ ನಡೆದಿದೆ. ತಮಿಳುನಾಡಿನ ಪುರೋಹಿತರು ಮದುವೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ನಡೆಸಿದ್ದಾರೆ ಎನ್ನಲಾಗಿದೆ.
ಅದಿತಿ ರಾವ್ ಹೈದರಿ ಅವರ ಮೊದಲ ಮದುವೆ ನಟ ಸತ್ಯದೀಪ್ ಮಿಶ್ರಾ ನಡೆದಿತ್ತು. ಆದರೆ 2013ರಲ್ಲಿ ಈ ಜೋಡಿ ವಿಚ್ಛೇದನ ಪಡೆದು ಬೇರ್ಪಟ್ಟಿತ್ತು. ಅದೇ ರೀತಿ, ಸಿದ್ದಾರ್ಥ್ ಕೂಡ ಮೇಘನಾ ನಾರಾಯಣ್ ರೊಂದಿಗೆ 2003ರಲ್ಲಿ ಮದುವೆಯಾಗಿ 2007ರಲ್ಲಿ ಡಿವೋರ್ಸ್ ಪಡೆದರು.
ಅದಿತಿ ರಾವ್ ಮತ್ತು ಸಿದ್ದಾರ್ಥ್ 'ಮಹಾಸಮುದ್ರಂ' ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದು, ಆಗ ಪ್ರೀತಿಯಲ್ಲಿ ಬಿದ್ದಿದ್ದರು. ಅಂದಿನಿಂದ ಇಬ್ಬರೂ ಒಟ್ಟಿಗೆ ಸುತ್ತಾಡುತ್ತಿದ್ದರು, ಡಿನ್ನರ್, ಲಂಚ್ ಮತ್ತು ಪಾರ್ಟಿಗಳಿಗೆ ಹೋಗುತ್ತಿದ್ದಾರೆ. ಆದರೆ ಪ್ರೀತಿ ಮತ್ತು ಮದುವೆಯ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿರಲಿಲ್ಲ. ಇದೀಗ ಇವರ ಪ್ರೀತಿಗೆ ಮದುವೆ ಎನ್ನುವ ಮುದ್ರೆ ಒತ್ತಿದ್ದಾರೆ.