ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರ ಶೇಖ್ ಜಮೀಲ್ ಉರ್ ರೆಹಮಾನ್ ಪಾಕಿಸ್ಥಾನದಲ್ಲಿ ನಿಗೂಢ ಹತ್ಯೆ
ನವದೆಹಲಿ: ಭಾರತ ಸರ್ಕಾರಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರ ಶೇಖ್ ಜಮೀಲ್ ಉರ್ ರೆಹಮಾನ್ ನ ಮೃತದೇಹ ಪಾಕಿಸ್ತಾನದ ಖೈಬರ್ ಪುಂಖ್ತುಖ್ವಾ ಪ್ರದೇಶದ ಅಬೋಟಾಬಾದ್‌ನಲ್ಲಿ ಪತ್ತೆಯಾಗಿದೆ. ಈತ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಜಮ್ಮು-ಕಾಶ್ಮೀರದ ಪುಲ್ವಾಮಾ ಮೂಲದವನಾದ ಶೇಖ್ ಜಮೀಲ್ ಉರ್ ರೆಹಮಾನ್ ಯುನೈಟೆಡ್ ಜಿಹಾದ್ ಕೌನ್ಸಿಲ್‌ನ (ಯುಜೆಸಿ) ಸ್ವಯಂ-ಘೋಷಿತ ಪ್ರಧಾನ ಕಾರ್ಯದರ್ಶಿಯಾಗಿದ್ದ. ಈತ ಭಾರತದಲ್ಲಿ ಅನೇಕ ವಿದ್ವಂಸಕ ಕೃತ್ಯಗಳನ್ನು ಸಂಘಟಿಸಿ ಪಾಕಿಸ್ತಾನಕ್ಕೆ ಪಲಾಯನಗೈದಿದ್ದ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಶೇಖ್ ಜಮೀಲ್ ಉರ್ ರೆಹಮಾನ್ ನನ್ನು ಭಾರತ ಸರ್ಕಾರ 2022ರ ಅಕ್ಟೋಬರ್ ನಲ್ಲಿ ಭಯೋತ್ಪಾದಕನೆಂದು ಘೋಷಿಸಿತ್ತು.
ಕಳೆದ ಕೆಲ ದಿನಗಳಿಂದ ಭಾರತ ಸರ್ಕಾರಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರರು ನಿಗೂಢ ರೀತಿಯಲ್ಲಿ ಮೃತಪಡುತ್ತಿದ್ದಾರೆ. 2023ರ ಡಿಸೆಂಬರ್ 17ರಂದು ಖೈಬರ್ ಪುಂಖ್ತುಖ್ವಾದಲ್ಲಿ ಲಷ್ಕರ್-ಎ- ತೋಯ್ದಾದೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದಕ ಹಬೀಬುಲ್ಲಾ ಮೇಲೆ ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿನ ದಾಳಿ ನಡೆದಿತ್ತು.
ಉಗ್ರಗಾಮಿ ಅಜಂ ಚೀಮಾ ಫೆಬ್ರವರಿಯಲ್ಲಿಯೇ ಮೃತಪಟ್ಟಿದ್ದಾನೆ. ಈತ 2006ರ ರೈಲು ಬಾಂಬ್ ಸ್ಫೋಟ ಮತ್ತು 26/11 ದಾಳಿಯ ಸಂಚಿನಲ್ಲಿ ಭಾಗಿಯಾಗಿದ್ದ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಲಷ್ಕರ್ ಕಮಾಂಡರ್ ಅನ್ನಾನ್ ಅಹ್ಮದ್ ಅಲಿಯಾಸ್ ಅಬು ಹಂಝಾಲಾನನ್ನು ಕರಾಚಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅದಕ್ಕೂ ಮುನ್ನ ನವೆಂಬರ್‌ನಲ್ಲಿ ಲಷ್ಕರ್ ಕಮಾಂಡರ್ ಅಕ್ರಮ್ ಗಾಜಿ ಮೇಲೆ ಗುಂಡು ಹಾರಿಸಲಾಗಿತ್ತು. ಇದಲ್ಲದೆ, ಸ್ವಾಜಾ ಶಾಹಿದ್ 2018 ರಲ್ಲಿ ಕೊಲ್ಲಲ್ಪಟ್ಟಿದ್ದ.