ಮದುವೆಗೆ ಕೆಲವೇ ಗಂಟೆಗಳಿರುವಾಗ ಜಿಮ್ ಟ್ರೈನರ್ ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ತಂದೆ
Saturday, March 9, 2024
ಮಂಗಳೂರು: ಇನ್ನೇನು ಹಸೆಮಣೆಯೇರಿ ದಾಂಪತ್ಯ ಜೀವನದ ಸಂತೋಷವನ್ನು ಅನುಭವಿಸಬೇಕಿದ್ದ ಭಾವೀ ವರನನ್ನು ಆತನ ತಂದೆಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ದುರ್ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.
ಗೌರವ್ ಸಿಂಘಾಲ್(29) ಹತ್ಯೆಯಾದ ದುರ್ದೈವಿ. ಆತನ ತಂದೆ ರಂಗಲಾಲ್ ಸಿಂಘಾಲ್(54) ಹತ್ಯೆ ಮಾಡಿರುವ ಆರೋಪಿ ಎಂದು ಹೇಳಲಾಗಿದೆ. ತಂದೆ ರಂಗಲಾಲ್ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ
ಪುತ್ರನ ಹತ್ಯೆಗೆ ಈತ ಮೂರ್ನಾಲ್ಕು ತಿಂಗಳಿನಿಂದ ಯೋಜನೆ ರೂಪಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಸದ್ಯ ಆರೋಪಿ ರಂಗ್ ಲಾಲ್ ನನ್ನು ಜೈಪುರದಲ್ಲಿ ಬಂಧಿಸಲಾಯಿತು. ಜಿಮ್ ಟ್ರೈನರ್ ಗೌರವ್ ಸಿಂಘಾಲ್ ಮದುವೆಗೆ ಕೇವಲ ಒಂದು ದಿನ ಉಳಿದಿರುವಾಗಲೇ ತಂದೆ ಆತನನ್ನು ಮನೆಯಲ್ಲಿಯೇ ಮುಖ ಮತ್ತು ಎದೆಗೆ 15 ಬಾರಿ ಇರಿದಿದ್ದಾನೆ. ತಕ್ಷಣ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅದಾಗಲೇ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದಾರೆ.
ಪೊಲೀಸ್ ವಿಚಾರಣೆಯ ವೇಳೆ ಆತ ಪುತ್ರನೊಂದೊಗೆ ತನ್ನ ಸಂಬಂಧವು ಸುಗಮವಾಗಿಲ್ಲ. ಪುತ್ರನ ಅತಿರಂಜಿತ ಜೀವನಶೈಲಿ ಮತ್ತು ಅಸಹಕಾರದಿಂದ ಅತೃಪ್ತರಾಗಿದ್ದೆ. ಆತನ ತಾಯಿ ಯಾವಾಗಲೂ ತನ್ನ ಪುತ್ರನನ್ನು ಬೆಂಬಲಿಸುತ್ತಿದ್ದಳು. ಹತ್ಯೆಯಾದ ರಾತ್ರಿ ಪುತ್ರ ಮತ್ತು ತನ್ನ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಈ ಸಂದರ್ಭ ಗೌರವ್ ತನಗೆ ಕಪಾಳಮೋಕ್ಷ ಮಾಡಿದ್ದಾನೆ. ಇದರಿಂದ ಹತಾಶೆಗೊಂಡು ಹತ್ಯೆ ಮಾಡಿದ್ದೇನೆ ಎಂದು ಆತ ಕಾರಣ ತಿಳಿಸಿದ್ದಾನೆ.