ಮಂಗಳೂರು: ಪಕ್ಷ ಗುಡಿಸಿ ಅಂದ್ರೆ ಗುಡಿಸ್ತೇವೆ, ಒರೆಸಿ ಅಂದ್ರೆ ಒರೆಸ್ತೇವೆ. ಅಧಿಕಾರ ಪ್ರಮುಖವಲ್ಲ - ನಳಿನ್ ಕುಮಾರ್ ಕಟೀಲು
Tuesday, March 12, 2024
ಮಂಗಳೂರು: ಬಿಜೆಪಿ ಟಿಕೆಟ್ ಕೈತಪ್ಪುವ ಸಾಧ್ಯತೆ ವಿಚಾರವಾಗಿ ಇಂದು ನಗರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸೋದು ಬಿಜೆಪಿ ವಿಶೇಷತೆ. ಪಕ್ಷದ ರಾಷ್ಟ್ರೀಯ ನಾಯಕರು ಯೋಚನೆ ಮಾಡಿಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಕೇಂದ್ರದ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇನೆ ಎಂದು ಹೇಳಿದರು.
ಪಕ್ಷ ನಿಂತ ನೀರಾಗಬಾರದು. ಹೊಸಬರು ಬರುತ್ತಿರುತ್ತಾರೆ. ಅವರನ್ನು ಸ್ವಾಗತಿಸುತ್ತೇನೆ. ಯಾರೇ ಆದರೂ ಮೋದಿ ಪ್ರಧಾನಿಯಾಗಬೇಕು, ಬಿಜೆಪಿ ಮತ್ತೆ ಗೆಲ್ಲಬೇಕು. ಪಕ್ಷ ಏನು ಹೇಳುತ್ತದೀ ಅದನ್ನ ನಾವು ಮಾಡುತ್ತೇವೆ. ಗುಡಿಸಿ ಅಂದ್ರೆ ಗುಡಿಸ್ತೇವೆ, ಒರೆಸಿ ಅಂದ್ರೆ ಒರೆಸ್ತೇವೆ. ಅಧಿಕಾರ ಪ್ರಮುಖ ಅಲ್ಲ, ರಾಷ್ಟ್ರೀಯ ನಾಯಕರ ಚಿಂತನೆ ಮುಖ್ಯ. ಸಾಮಾಜಿಕ ತಾಣಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಪಕ್ಷದ ನಿರ್ಧಾರಕ್ಕೆ ಬದ್ಧ ಎಂದರು.
ನಾವು ಅಧಿಕಾರವನ್ನೇ ನಂಬಿ ಇದ್ದವರಲ್ಲ. ಸಂಘಟನೆ ಕಾರ್ಯವನ್ನು ನಂಬಿದವರು. ನನಗೆ ಮೂರು ಬಾರಿ ಅವಕಾಶ ಕೊಡಲಾಗಿದೆ. 15 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಎಲ್ಲೂ ವ್ಯತ್ಯಾಸಗಳಿಲ್ಲ, ನಮ್ಮ ಪಕ್ಷದಲ್ಲಿ ತುಳಿಯುವ ಕೆಲಸ ನಡೆಯಲ್ಲ. ಬೆಳೆಸುವ ಕೆಲಸ ಮಾಡ್ತಾರೆ. ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದೆ. ಬಿಜೆಪಿ ಕೆಲಸ ಮಾಡು ಎಂದು ಹೇಳಿದ್ದಕ್ಕೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ಸಂಸತ್ ಸದಸ್ಯನಾದೆ. ಸಾಮಾನ್ಯ ಕಾರ್ಯಕರ್ತನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೂಡ ಕೊಟ್ಟರು. ಈಗ ಅಸಮಾಧಾನ ಯಾಕೆ? ನಾವು ಮಾಡೋದು ಸಂಘಟನೆ ಕಾರ್ಯ. ಅಸಮಾಧಾನ ಯಾವುದೇ ಸಂದರ್ಭದಲ್ಲಿ ಇರಲ್ಲ, ಅದು ಅಸಾಧ್ಯ ಎಂದು ನಳಿನ್ ಕುಮಾರ್ ಹೇಳಿದರು.