ಹೋಳಿ ಬಣ್ಣದ ಬಗ್ಗೆ ಇರಲಿ ಎಚ್ಚರ
ಪ್ರತಿಹಬ್ಬಕ್ಕೂ ಈ ನೆಲದಲ್ಲಿ ತನ್ನದೇ ಆದ ಇತಿಹಾಸ, ಮಹತ್ವವಿದೆ. ಈ ಪೈಕಿ ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ವಿವಿಧ ರೀತಿಯಲ್ಲಿ ಆಚರಿಸುವ ಹೋಳಿ ಹಬ್ಬಕ್ಕೆ ವಿಶೇಷ ಪ್ರಾಶಸ್ತ್ರವಿದೆ. ಹೋಳಿ ಎಂದರೆ ಬಣ್ಣದೋಕುಳಿಯ ಹಬ್ಬ ರಂಗುರಂಗಿನ ಬಣ್ಣ ಎರಚುವುದರೊಂದಿಗೆ ಸ್ನೇಹಿತರು, ಬಂಧು-ಬಳಗದವರು, ನೆರೆಹೊರೆಯವರೊಂದಿಗೆ ಪ್ರೀತಿ ಬೆಸೆಯುವ ಹಬ್ಬ ಈಗಾಗಲೇ ಹೋಳಿ ಸಂಭ್ರಮ ಎಲ್ಲೆಡೆ ಕಾಣುತ್ತಿದೆ. ಹಬ್ಬದ ಸಂಭ್ರಮ ಒಂದೆಡೆಯಾದರೆ ಮತ್ತೊಂದೆಡೆ ಹೋಳಿಯಲ್ಲಿ ಬಳಕೆಯಾಗುವ ಬಣ್ಣಗಳಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆಯಿದ್ದೆ ಆರೋಗ್ಯದ ಬಗ್ಗೆ ಲೆಕ್ಕಿಸದೆ ಅನೇಕ ಮಂದಿ ಹೋಳಿ ಆಚರಿಸಲು ಮುಂದಾಗುತ್ತಾರೆ. ಹೋಳಿ ಆಚರಣೆಯಲ್ಲಿ ಬಳಸಲಾಗುವ ಸಿಂಥೆಟಿಕ್ ಬಣ್ಣಗಳು ಕೂದಲಿನ ಬುಡದಲ್ಲಿ ಉಗುರಿನ ಕೆಳಗೆ ಅಥವಾ ಕಿವಿ ಹಿಂಭಾಗದಲ್ಲಿ ಉಳಿದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೀಗಾಗಿ ನೈಸರ್ಗಿಕ ಬಣ್ಣಗಳಿಂದ ಹೋಳಿ ಹಬ್ಬದ ಆಚರಣೆ ಮಾಡುವುದು ಸೂಕ್ತ. ನೈಸರ್ಗಿಕ ಬಣ್ಣಗಳನ್ನು ಸ್ವಚ್ಛಗೊಳಿಸುವುದು ಸುಲಭ.
• ಹೋಳಿ ಹಬ್ಬಕ್ಕೆ ಬಳಸುವ ಬಣ್ಣಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು
ಬಣ್ಣಗಳಲ್ಲಿ ಬಳಸಲಾದ ರಾಸಾಯನಿಕ ಅಂಶಗಳಿಂದ ಚರ್ಮಕ್ಕೆ ಸಂಬಂಧಿಸಿದ ಅಲರ್ಜಿ, ತುರಿಕೆ, ಸುಟ್ಟಂತಹ ಅನುಭವಗಳು ಕಂಡುಬರುತ್ತವೆ. ಕೆಲವರಿಗೆ ಚರ್ಮ ಕೆಂಪಾಗಾಗುವ ಸಾಧ್ಯತೆಯೂ ಇರುತ್ತದೆ.
ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಇಲ್ಲಿವೆ
• ತ್ವಚೆ, ಕೈ ಕಾಲುಗಳಿಗೆ ಅಗತ್ಯವಿರುವಷ್ಟು ಮಾಯಿಶ್ಚರೈಸರ್ ಮತ್ತು ಸನ್‌ಸ್ಟೀನ್ ಬಳಸಿ. ಕೂದಲಿಗೆ ಎಣ್ಣೆಯನ್ನು ಹಚ್ಚಿ ಆದರೆ ಅತಿಯಾಗಿ ಬಳಸದಿರುವುದು ಉತ್ತಮ.
• ಕೈ ಕಾಲಿನ ಉಗುರುಗಳನ್ನು ಸರಿಯಾಗಿ ಟ್ರಿಮ್ ಮಾಡಿ. ಈ ಮೂಲಕವೂ ಉಗುರುಗಳ ಕೆಳಗೆ ಬಣ್ಣ ಶೇಖರಣೆಯಾಗುವುದನ್ನು ತಪ್ಪಿಸಬಹುದು.
• ತುಂಬು ತೋಳಿರುವ ಬಟ್ಟೆಯನ್ನು ಧರಿಸಿ.
• ಕೋಮಲವಾದ ತುಟಿಗಳಿಗೆ ಲಿಪ್ ಬಾಮ್/ಯಾವುದಾದರೂ ಪೆಟ್ರೋಲಿಯಂ ಜೆಲ್ಲಿಗಳನ್ನು ಹಚ್ಚುವುದು ಒಳಿತು.
• ಬಣ್ಣ ಎರಚುವ ವೇಳೆ ಮಹಿಳೆಯರು ನಿಮ್ಮ ಕೂದಲನ್ನು ಮೇಲೆತ್ತಿ ಕಟ್ಟುವುದು ಒಳಿತು.
• ಹೋಳಿ ಆಚರಣೆಯ ಮುಂಚಿನ ಐದು ದಿನಗಳಲ್ಲಿ ಅಥವಾ ಆಚರಣೆಯ ನಂತರದ ಐದು ದಿನಗಳಲ್ಲಿ ಚರ್ಮಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಫ್ರೆಡಿಂಗ್, ಬೀಚಿಂಗ್, ಲೇಸರ್ ಚಿಕಿತ್ಸೆ ವಾಕ್ಸಿಂಗ್‌ಗಳನ್ನು ಮಾಡಿಸದಿರುವುದು ಉತ್ತಮ.
- ಸಾವಯವ ಬಣ್ಣಗಳ ಬಳಕೆ ಹೆಚ್ಚಲಿ
ಸಿಂಥೆಟಿಕ್ ಬಣ್ಣಗಳಿಗೆ ಪರ್ಯಾಯವಾಗಿ ಸಾವಯವ ಬಣ್ಣಗಳನ್ನು ಬಳಸುವುದು ಸುರಕ್ಷಿತ. ಚರ್ಮರೋಗ ಹೊಂದಿರುವವರು ಯಾವುದೇ ರೀತಿಯ ಬಣ್ಣದ ಬಳಕೆ ಮಾಡದಿರುವುದು ಸೂಕ್ತ. ಹೋಳಿ ಆಚರಣೆಯ ನಂತರ ಆದಷ್ಟು ಬೇಗನೆ ಚರ್ಮವನ್ನು ನೀರಿನಿಂದ ಸ್ವಚ್ಛಗೊಳಿಸುವುದು ಅಗತ್ಯ ಈ ವೇಳೆ ಚರ್ಮವನ್ನು ಉಜ್ಜುವುದು ಅಥವಾ ಅತಿಯಾದ ಬಿಸಿನೀರಿನಿಂದ ತೊಳೆಯುವುದನ್ನು ಮಾಡಬೇಡಿ. ಹೋಳಿ ನಂತರದ ಎರಡು ದಿನಗಳು ಯಾವುದೇ ರೀತಿಯ ಚರ್ಮದ ಆರೈಕೆ – ಚಟುವಟಿಕೆಗಳನ್ನು ಮಾಡಲೂ ಹೋಗಬೇಡಿ