ಕರ್ನಾಟಕದಲ್ಲಿ ಹೆಚ್ಚುತ್ತಿದೆ ಬರಗಾಲದ ಛಾಯೆ , ಈಗಲೇ ಎಚ್ಚೆತ್ತು ಕೊಳ್ಳುವುದು ಅಗತ್ಯ
ಕರ್ನಾಟಕದ ಹಲವೆಡೆ ಕಾಡುತ್ತಿದೆ ತೀವ್ರ ಬರಗಾಲ ಮತ್ತು ಜಲಸಂಕಷ್ಟದ ಸಮಸ್ಯೆ ಹೆಚ್ಚುತ್ತಿದೆ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದೆ. ಮಾರ್ಚ್‌ನ ಬೇಸಿಗೆಯ ಆರಂಭದ ದಿನಗಳಲ್ಲಿಯೆ , ಬರಗಾಲದ ಕರಾಳತೆ ಎಲ್ಲೆಡೆ ಹರಡಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶೋಚನೀಯವಾಗಿದೆ ಜಾನುವಾರುಗಳ ಸ್ಥಿತಿ ಅದರಲ್ಲೂ, ರೈತರು ಮುಂದಿನ ಆದಾಯದ ಮಾರ್ಗದ ಬಗ್ಗೆ ಚಿಂತಿಸುತ್ತಿದ್ದಾರೆ.
ಕೃಷಿ ಚಟುವಟಿಕೆಗಳು ಸ್ತಬ್ಧಗೊಂಡಿದ್ದರೆ, ಹೈನುಗಾರಿಕೆಗೆ ಬರ ಭಾರಿ ಪಟ್ಟು ನೀಡಿದೆ.
ಹಸಿ ಮೇವಿನ ಕೊರತೆಯಿಂದಾಗಿ ಸ್ವಂತ ಜಮೀನು ಇಲ್ಲದಿರುವವರು ಎಮ್ಮೆ, ಹಸುಗಳನ್ನು ಅಗ್ಗದ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.
ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಇಲ್ಲದ್ದರಿಂದ ರೈತರು ಎತ್ತು, ಹೋರಿಗಳನ್ನು ಮಾರಾಟ ಮಾಡುವ ಪ್ರಮಾಣ ಹೆಚ್ಚಳವಾಗಿದೆ. 2023ಕ್ಕೆ ಹೋಲಿಸಿದರೆ ಈ ವರ್ಷ ಮಾರಾಟ ಪ್ರಮಾಣ ಶೇಕಡ 21ರಷ್ಟು ಹೆಚ್ಚಳವಾಗಿರುವುದು ಸಂಕಷ್ಟದ ಗಂಭೀರತೆಗೆ ಸಾಕ್ಷಿಯಾಗಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಗ್ರಾಮೀಣ ಭಾಗದ ಜನರು ಉದ್ಯೋಗವಿಲ್ಲದೆ, ಪೇಟೆಗಳತ್ತ ವಲಸೆ ಹೋಗುತ್ತಿದ್ದಾರೆ. ವಯಸ್ಸಾದವರು, ಅಶಕ್ತರನ್ನು ಬಿಟ್ಟರೆ ಉಳಿದವರು ಹೊಟ್ಟೆ ತುಂಬಿಸಿಕೊಳ್ಳಲು ನಗರಗಳನ್ನು ಆಶ್ರಯಿಸುತ್ತಿರುವ ಪ್ರಮಾಣ ಹೆಚ್ಚುತ್ತಲೇ ಇದೆ. ರಾಜಧಾನಿ ಬೆಂಗಳೂರು ಕೂಡ ನೀರಿಗಾಗಿ ಪರದಾಡುತ್ತಿದ್ದು, ಪರಿಹಾರದ ದಾರಿ ಮಾತ್ರ ಗೋಚರಿಸುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಒಂದಿಷ್ಟು ಪ್ರಯತ್ನಗಳು ಮಾಡಲಾಗಿದೆಯಾದರೂ, ಈಗಿರುವ ಸಮಸ್ಯೆಗಳ ತೀವ್ರತೆಗೆ ಅದು ಸಾಲದು. ಅಲ್ಲದೆ, ಲೋಕಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳ ಚಿತ್ತ ಈಗ ಮತಬೇಟೆಯತ್ತ. ಚುನಾವಣೆ ಮುಗಿದು, ಫಲಿತಾಂಶ ಪ್ರಕಟವಾಗುವ ಹೊತ್ತಲ್ಲಿ ಬೇಸಿಗೆಯೇ ಮುಗಿದಿರುತ್ತದೆ. ಬಿಸಲಿನ ಬೇಗೆಗೆ ಅಗ್ನಿದುರಂತಗಳು ಹೆಚ್ಚುತ್ತಿರುವುದು ಆತಂಕದ ಸಂಗತಿ. ಬೆಂಕಿ ಆರಿಸಲು ಕೂಡ ನೀರು ಸಿಗದಂಥ ಸನ್ನಿವೇಶ ಸೃಷ್ಟಿಯಾಗಿದೆ. ಅರಣ್ಯ ಪ್ರದೇಶಗಳ ಕೆರೆಗಳು ಸಂಪೂರ್ಣ ಬತ್ತಿ ಹೋಗಿರುವುದರಿಂದ ವನ್ಯಜೀವಿಗಳು ಹನಿ ನೀರಿಗೂ ತತ್ತರಿಸುತ್ತಿವೆ. ಮೂಕಪ್ರಾಣಿಗಳ ಕಷ್ಟಕ್ಕೆ ಎಚ್ಚೆತ್ತ ಅರಣ್ಯ ಇಲಾಖೆ ಕೃತಕ ಹೊಂಡಗಳಿಗೆ ಮೊರೆ ಹೋಗಿದೆ. ಅಂದರೆ, ನಾಡಿನಿಂದ ಕಾಡಿನವರೆಗೆ ಜಲಕ್ಕಾಗಿ ಹಾಹಾಕಾರ.
ಮನುಷ್ಯನಿರ್ಮಿತ ಪ್ರಮಾದಗಳು, ಪರಿಸರ ಸಂರಕ್ಷಣೆ ಬಗ್ಗೆ ಅವಗಣನೆ, ಜಲ ಸಂಪನ್ಮೂಲ ಕಾಪಾಡಿಕೊಳ್ಳಲು ತೋರಿದ ಅಸಡ್ಡೆ ಯಾವೆಲ್ಲ ಅನಾಹುತಗಳನ್ನು ಸೃಷ್ಟಿಸಬಹುದು ಎಂಬುದಕ್ಕೆ ಈ ಬಾರಿಯ ಬರಗಾಲ ಸಾಕ್ಷಿಯಾಗಿದೆ. ಈ ಪರಿಸ್ಥಿತಿಯನ್ನು ಎದುರಿಸಲು ಈಗ ಸಾಮೂಹಿಕ ಮಾಗೋಪಾಯಗಳನ್ನು ಕಂಡುಕೊಳ್ಳಬೇಕಿದೆ. ನೀರಿನ ಮಹತ್ವವನ್ನು ಅರಿತು, ಮುಂದಿನ ದಿನಗಳಲ್ಲಿ ಜಲಸಂರಕ್ಷಣೆಯು ಜನಾಂದೋಲನ ಸ್ವರೂಪದಲ್ಲಿ ನಡೆಯುವುದು ಅಗತ್ಯವಾಗಿದೆ. ಪ್ರಕೃತಿ ರವಾನಿಸಿದ ಎಚ್ಚರಿಕೆಗೆ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳ ಸ್ಥಿತಿ ಊಹಿಸಲು ತುಂಬಾ ಕಷ್ಟ ಎಂಬ ವಾಸ್ತವ ಅರ್ಥ ಮಾಡಿಕೊಳ್ಳುವ ಸಮಯವಿದು. ಸರ್ಕಾರ, ಸಂಘ ಸಂಸ್ಥೆಗಳು, ಜನಸಾಮಾನ್ಯರು ನಿಸರ್ಗಸ್ನೇಹಿ ನೀತಿಗಳನ್ನು ರೂಪಿಸಿಕೊಳ್ಳುವ ಮತ್ತು ಪರಿಣಾಮಕಾರಿಯಾಗಿ ಅದನ್ನು ಅನುಷ್ಠಾನಕ್ಕೆ ತರುವ ಸಂಕಲ್ಪ ಕೈಗೊಳ್ಳಬೇಕು. ಪ್ರಸ್ತುತ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಿ, ಜನರ ಸಂಕಷ್ಟವನ್ನು ನಿವಾರಿಸುವುದು ಪ್ರಥಮ ಆದ್ಯತೆಯಾಗಲಿ.