ಮಂಗಳೂರು: ಪಾದ್ರಿಯಿಂದ ವೃದ್ಧದಂಪತಿ ಮೇಲೆ ಹಿಗ್ಗಾಮುಗ್ಗಾ ಥಳಿತ - ವೀಡಿಯೋ ದಾಖಲೆಗಳಿದ್ದರೂ ಇನ್ನೂ ಕ್ರಮ ಇಲ್ಲ ವೃದ್ಧ ದಂಪತಿ ಅಳಲು
Tuesday, March 26, 2024
ಮಂಗಳೂರು: ದ.ಕ.ಜಿಲ್ಲೆಯ ವಿಟ್ಲದ ಪೆರಿಯಾಲ್ತಡ್ಕದ ಕ್ರೈಸ್ಟ್ ಕಿಂಗ್ ಚರ್ಚ್ ಪಾದ್ರಿ ವೃದ್ಧದಂಪತಿಗೆ ಹಿಗ್ಗಾಮುಗ್ಗಾ ಥಳಿಸಿರುವ ತಿಂಗಳೊಂದು ಆಗುತ್ತಾ ಬಂದರೂ ಆತನ ಮೇಲೆ ಯಾವ ಕ್ರಮವೂ ಆಗಿಲ್ಲ. ಜೊತೆಗೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಮತ್ತು ಅಲ್ಲಿನ ಅಧಿಕಾರಿಗಳು ಕೃತ್ಯವನ್ನು ಮುಚ್ಚಿಹಾಕುವ ಯತ್ನದಲ್ಲಿದ್ದಾರೆ ಎಂದು ವೃದ್ಧ ದಂಪತಿ ಇಂದು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಪೆರಿಯಾಲ್ತಡ್ಕದ ಕ್ರೈಸ್ಟ್ ಕಿಂಗ್ ಚರ್ಚ್ ಪಾದ್ರಿ ಫಾ.ನೆಲ್ಸನ್ ಓಲಿವೆರಾ ಫೆ.29ರಂದು ಗ್ರೆಗರಿ ಮೊಂತೇರೊ ಅವರ ಮನೆಗೆ ಬಂದು ವಂತಿಗೆ ಕೊಡುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ಸಂಪೂರ್ಣ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮೊದಲು ಈ ಪ್ರಕರಣ ದಾಖಲಾಗದಂತೆ ನೋಡಿಕೊಳ್ಳಲಾಗಿತ್ತು. ಆ ಬಳಿಕ ರಾಬರ್ಟ್ ರೊಸಾರಿಯೋ ಎಂಬವರ ಮಧ್ಯ ಪ್ರವೇಶದಿಂದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪಾದ್ರಿಯ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆದರೆ, ಹಲ್ಲೆಗೆ ವೀಡಿಯೋ ಸಾಕ್ಷಿಯಿದ್ದರೂ ಪಾದ್ರಿಯನ್ನು ಈವರೆಗೆ ಅರೆಸ್ಟ್ ಆಗಿಲ್ಲ.
ಈ ನಡುವೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಅವರ ಪಿಆರ್ ಒ ಕೃತ್ಯವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಮಕ್ಕಳಿಲ್ಲದ ಇಬ್ಬರೇ ಇರುವ ವೃದ್ಧ ದಂಪತಿಗೆ ಮಾನಸಿಕವಾಗಿ ಕಿರುಕುಳ ನೀಡಿ ಕೇಸು ವಾಪಸ್ ಪಡೆಯಲು ಒತ್ತಡ ಹೇರುತ್ತಿದ್ದಾರೆ. ಗ್ರೆಗೊರಿ ಮೊಂತೆರೋ ದಂಪತಿಯನ್ನು ಚರ್ಚಿನಿಂದ ಹೊರಗಿಡುವ ಪ್ರಯತ್ನವೂ ಆಗುತ್ತಿದೆ. ಧರ್ಮಪ್ರಾಂತ್ಯದ ವಾಟ್ಸ್ಆ್ಯಪ್ ಗ್ರೂಪಿನಿಂದ ರಿಮೂವ್ ಮಾಡಿದ್ದಾರೆ. ಪ್ರಕರಣ ದಾಖಲಾದ ಬೆನ್ನಲ್ಲೇ ಪಾದ್ರಿಯನ್ನು ಕ್ರೈಸ್ಟ್ ಕಿಂಗ್ ಚರ್ಚ್ ನಿಂದ ತೆರವು ಮಾಡಿದ್ದು ಬಿಟ್ಟರೆ ಬೇರಾವ ಕ್ರಮ ಮಂಗಳೂರು ಧರ್ಮಪ್ರಾಂತ್ಯದಿಂದ ಆಗಿಲ್ಲ. ಪೊಲೀಸರು ಕೃತ್ಯ ಎಸಗಿದವನು ಪಾದ್ರಿ ಎಂಬ ಕಾರಣಕ್ಕೆ ಆತನ ಮೇಲೆ ಕ್ರಮ ಜರುಗಿಸಲು ಮೀನಾ - ಮೇಷಾ ಎಣಿಸುತ್ತಿದ್ದಾರೆ. ಆದ್ದರಿಂದ ಪಾದ್ರಿ ಎಂಬುದನ್ನು ನೋಡದೆ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.