ಶೂಟಿಂಗ್ ಸಂದರ್ಭ ಒಬ್ಬ ಹಾವು ಕಚ್ಚಿ ಸತ್ತೇಹೋದ : ದೇವಿ ಸಿನಿಮಾದ ಶಾಕಿಂಗ್ ವಿಚಾರ ಹೇಳಿದ ನಟಿ ಪ್ರೇಮಾ
Wednesday, March 13, 2024
ಬೆಂಗಳೂರು: ಕನ್ನಡತಿ ನಟಿ ಪ್ರೇಮಾ ಅವರು ಒಂದು ಕಾಲದಲ್ಲಿ ತೆಲುಗು, ಮಲಯಾಳಂ, ಕನ್ನಡ ಸಿನಿಮಾದಲ್ಲಿ ಬಹುಬೇಡಿಕೆಯ ನಟಿ. 90ರ ದಶಕದಲ್ಲಿ ಪ್ರೇಮಾ ಅನೇಕ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪ್ರೇಮಾ ಅವರು ಸಿನಿಮಾ ಚಿತ್ರೀಕರಣದ ವೇಳೆ ನಡೆದಿರುವ ಒಂದು ಘಟನೆಯಿಂದ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆಯ ಕುರಿತಾಗಿ ಹೇಳಿದ್ದಾರೆ.
ಕೋಡಿ ರಾಮಕೃಷ್ಣ ಟಾಲಿವುಡ್‌ನ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಇವರು ಇದೀಗ ನಮ್ಮೊಂದಿಗೆ ಇಲ್ಲ. ಆದರೆ ಇವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಅನೇಕ ಸಿನಿಮಾಗಳು ಈಗಲೂ ನಮ್ಮನ್ನು ರಂಜಿಸುತ್ತಿರುತ್ತದೆ. ಕೋಡಿ ರಾಮಕೃಷ್ಣ ನಿರ್ದೇಶನದ ಸೂಪರ್ ಹಿಟ್ ಚಿತ್ರಗಳಲ್ಲಿ ದೇವಿ ಸಿನಿಮಾವೂ ಒಂದು. ಈ ಸಿನಿಮಾ ಬಿಡುಗಡೆಯಾಗಿ ಇದೀಗ 25 ವರ್ಷಗಳಾಗಿವೆ. ನಟಿ ಪ್ರೇಮಾ ಅವರು ಈ ಸಿನಿಮಾ ಕುರಿತಾಗಿ ಮಾತನಾಡಿದ್ದು ಈಗ ವೈರಲ್ ಆಗಿದೆ.
ನಟಿ ಪ್ರೇಮಾ ಈ ಸಿನಿಮಾದ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆ ಕಾಲದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ದೊಡ್ಡ ರಿಸ್ಕ್ ಆಗಿದ್ದರೂ ಕೋಡಿ ರಾಮಕೃಷ್ಣ ಅವರು ಈ ಸಿನಿಮಾ ಮಾಡಿ ಸೂಪರ್ ಹಿಟ್ ಮಾಡಿದ್ದಾರೆ. ಒಂದೊಂದು ಸೀನ್ ಗೂ 50 ಟೇಕ್ ಗಳನ್ನು ತೆಗೆದುಕೊಂಡದ್ದು ಇದೆ. ಈ ಸಿನಿಮಾ ಡೈಲಾಗ್ ಚೆನ್ನಾಗಿ ಅಭ್ಯಾಸ ಮಾಡಿದ್ದೇನು. ದೇವಿ ಹೇಗೆ ಮಾತನಾಡುತ್ತಾಳೆ, ಹಾವಭಾವ ಹೇಗಿರುತ್ತದೆ ಎಂಬುದನ್ನು ಕ್ಲೋಸ್‌ಅಪ್ ಮಾಡಿದ್ದೇವೆ ಎಂದು ಪ್ರೇಮಾ ಹೇಳಿದ್ದಾರೆ.
ಈ ಸಿನಿಮಾಕ್ಕಾಗಿ ಬಹಳ ಕಷ್ಟಪಟ್ಟಿದ್ದೇವೆ. ಚಿತ್ರೀಕರಣದ ವೇಳೆ ಹಾವೊಂದು ವ್ಯಕ್ತಿಯೊಬ್ಬನಿಗೆ ಕಚ್ಚಿದೆ. ಆಸ್ಪತ್ರೆಗೆ ಕರೆದೊಯ್ದರೂ ಬದುಕಲು ಸಾಧ್ಯವಾಗಲಿಲ್ಲ. ಚಿತ್ರ ಬಿಡುಗಡೆಯಾದ ನಂತರ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಯಿತು. ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಇಷ್ಟು ರೇಂಜ್ ಹಿಟ್ ಸಿಗುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ ಪ್ರೇಮಾ.