ಮಂಗಳೂರು: ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ವಿರೋಧ : ಜಿಲ್ಲಾಧ್ಯಕ್ಷರನ್ನೇ ಕೋಣೆಯೊಳಗೆ ಕೂಡಿ ಹಾಕಿದ ಬಿಜೆಪಿ ಕಾರ್ಯಕರ್ತರು...!
Saturday, March 16, 2024
ಮಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯ ಕಹಳೆ ಮೊಳಗಿಸಿದ್ದ ಅರುಣ್ ಕುಮಾರ್ ಪುತ್ತಿಲ ಗುರುವಾರ ಬೆಂಗಳೂರಿನಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಶುಕ್ರವಾರ ಸಂಜೆ ಮಂಗಳೂರಿನ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಅರುಣ್ ಪುತ್ತಿಲ ಹಾಗೂ ಬೆಂಬಲಿಗರು ಅಧಿಕೃತವಾಗಿ ಬಿಜೆಪಿ ಸೇರುವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿತ್ತು. ಆದರೆ ಅಷ್ಟರಲ್ಲಾಗಲೇ ಪುತ್ತೂರಿನ ಕೆಲ ಕಾರ್ಯಕರ್ತರು ಅವರ ವಿರುದ್ಧ ಸಿಡಿದು ನಿಂತಿ ಅವರು ಪಕ್ಷ ಸೇರ್ಪಡೆಗೊಳ್ಳುವುದನ್ನು ವಿರೋಧಿಸಿದ್ದಾರೆ.
ಈ ವಿಚಾರ ತಿಳಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪುತ್ತೂರಿಗೆ ದೌಢಾಯಿಸಿದ್ದಾರೆ. ಈ ವೇಳೆ ಬಿಜೆಪಿ ಕಚೇರಿಯಲ್ಲಿ ಬಾಗಿಲು ಹಾಕಿ ಕಾರ್ಯಕರ್ತರನ್ನು ಮನವೊಲಿಸುವ ಕೆಲಸ ಮಾಡಿದ್ದಾರೆ. ಆದರೆ ಕೆಲವು ಕಾರ್ಯಕರ್ತರು ಅರುಣ್ ಪುತ್ತಿಲರನ್ನು ಮರಳಿ ಬಿಜೆಪಿ ಸೇರಿಸಬಾರದು ಎಂದೇ ಪಟ್ಟು ಹಿಡಿದಿದ್ದಾರಂತೆ. ಪಕ್ಷಕ್ಕೆ ಸೇರಿಸಿದರೂ ಪ್ರಮುಖ ಜವಾಬ್ದಾರಿ ನೀಡಬಾರದು ಎಂದು ಒತ್ತಾಯ ಮಾಡಿದ್ದಾರೆ.
ಸಂಜೆ 5 ಗಂಟೆಗೆ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಆರಂಭವಾದ ಸಭೆ ರಾತ್ರಿ 8ಗಂಟೆಯಾದರೂ ಮುಗಿದಿಲ್ಲ. ಪ್ರಭಾವಿ ರಾಜಕಾರಣಿಯೊಬ್ಬರ ಆಪ್ತರಾದ ಕೆಲವು ಕಾರ್ಯಕರ್ತರು ಜಿಲ್ಲಾಧ್ಯಕ್ಷರನ್ನೇ ಕಚೇರಿಯಲ್ಲಿ ಕೂಡಿಹಾಕಿ ಬೆದರಿಸುವ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕರ್ನಾಟಕ ಹಲವು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ,ತಾವು ಪಕ್ಷೇತರ ಅಭ್ಯರ್ಥಿಯಾಗಿ ಈ ಬಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸುವುದು ಖಚಿತ ಎಂದು ಈಶ್ವರಪ್ಪ ಘೋಷಿಸಿದ್ದಾರೆ.
ಶಿವಮೊಗ್ಗದ ಬಂಜಾರ ಸಭಾ ಭಲವನದಲ್ಲಿ ರಾಷ್ಟ್ರ ಭಕ್ತರ ಬಳಗ ಕರೆದಿರುವ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಈಶ್ವರಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.