ತುಮಕೂರು: ಜಾತ್ರೆಗೆ ಬಂದಿದ್ದ ಬಾಲಕಿಗೆ ಬೆದರಿಕೆಯೊಡ್ಡಿ ಅತ್ಯಾಚಾರ - ಮೂವರು ಕಾಮುಕರು ಅರೆಸ್ಟ್
Thursday, March 7, 2024
ತುಮಕೂರು: ಸ್ನೇಹಿತನೊಂದಿಗೆ ಸಿದ್ಧಗಂಗಾಮಠದ ಜಾತ್ರೆಗೆ ಬಂದಿದ್ದ ಬಾಲಕಿಗೆ ಬೆದರಿಕೆಯಿಡ್ಡಿ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಬಂಡೇಪಾಳ್ಯದಲ್ಲಿ ವಾಸವಾಗಿದ್ದ ಬಾಗಲಕೋಟೆ ಮೂಲದ ಅಮೋಘ (22), ಹನುಮಂತ (22), ಪ್ರತಾಪ್ (20) ಬಂಧಿತ ಕಾಮುಕರು.
ಸೋಮವಾರ ಬಾಲಕಿ ಸ್ನೇಹಿತನೊಂದಿಗೆ ಸಿದ್ದಗಂಗಾಮಠದ ಜಾತ್ರೆಗೆ ಬಂದಿದ್ದಳು. ಈ ವೇಳೆ ಇಬ್ಬರೂ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಕುಳಿತಿದ್ದರು. ಈ ವೇಳೆ ಆರೋಪಿಗಳು ಮೊಬೈಲ್‌ನಲ್ಲಿ ಅವರ ವಿಡಿಯೋ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಹೆದರಿಸಿದ್ದಾರೆ.
ಬಳಿಕ ಬಾಲಕಿಯನ್ನು ತಮ್ಮೊಂದಿಗೆ ಬರುವಂತೆ ಒತ್ತಾಯಿಸಿ ರೂಮ್‌ಗೆ ಕರೆದೊಯ್ದಿದ್ದಾರೆ. ಅಲ್ಲಿ ಮೂವರೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ದೌರ್ಜನ್ಯ ಎಸಗಿದ ಬಳಿಕ ಸಂತ್ರಸ್ತೆಯನ್ನು ಮತ್ತೆ ಮಠದ ಬಳಿ ತಂದು ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕೃತ್ಯದಲ್ಲಿ ಭಾಗಿಯಾದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.