ಒಂದೇ ಕುಟುಂಬದ ಐವರು ಮೃತದೇಹವಾಗಿ ಪತ್ತೆ: ಪತ್ನಿ, ಮೂವರು ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆಗೆ ಶರಣಾದ ಪತಿ
Wednesday, March 6, 2024
ಕೇರಳ: ಇಲ್ಲಿನ ಕೊಟ್ಟಾಯಂನ ಅಕಲಕುನ್ನಂ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ಒಂದೇ ಕುಟುಂಬದ ಮೂವರು ಮಕ್ಕಳು ಸೇರಿದಂತೆ ಐವರು ಮೃತದೇಹವಾಗಿ ಪತ್ತೆಯಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಜೈಸನ್ ಎಂಬವರು, ಅವರ ಪತ್ನಿ, ಮೂವರು ಮಕ್ಕಳು ಸೇರಿದಂತೆ ಇಡೀ ಕುಟುಂಬವೇ ಸಾವಿಗೀಡಾಗಿದೆ. ಈ ಪ್ರಕರಣದಲ್ಲಿ 10 ವರ್ಷದೊಳಗಿನ ಮೂವರು ಮಕ್ಕಳೂ ಮೃತಪಟ್ಟಿದ್ದಾರೆ. ಜೈಸನ್ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಪತ್ನಿ ಮತ್ತು ಮೂವರು ಮಕ್ಕಳು ಹಾಸಿಗೆಯ ಮೇಲೆ ರಕ್ತದ ಕಲೆಗಳಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐವರೂ ಅಕಲಕುನ್ನಂ ಜಂದುಪಾರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಯಾವ ಕಾರಣಕ್ಕಾಗಿ ಸಾವಿಗೀಡಾಗಿದ್ದಾರೆ ಎಂಬುದು ತನಿಖೆ ಮಾಡಲಾಗುತ್ತಿದೆ. ಜೈಸನ್ ಅವರು ಮೊದಲು ಪತ್ನಿ ಮತ್ತು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.