ಕೊಳವೆ ಬಾವಿಗೆ ಬಿದ್ದ 2ವರ್ಷದ ಬಾಲಕ: ಸಾವು ಗೆದ್ದು ಬಂದ ಸಾತ್ವಿಕ್
Thursday, April 4, 2024
ವಿಜಯಪುರ: ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟವೊಂದರಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗುವನ್ನು ರಕ್ಷಣೆ ಮಾಡುವಲ್ಲಿ ಎನ್ಡಿಆರ್ಎಫ್ ತಂಡವು ಯಶಸ್ವಿಯಾಗಿದೆ. ಇದೀಗ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಸತೀಶ್ ಹಾಗೂ ಪೂಜಾ ದಂಪತಿಯ ಪುತ್ರ ಸಾತ್ವಿಕ್ ಆಟವಾಡುತ್ತಾ ಆಯತಪ್ಪಿ 20 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದಾನೆ. ಸಾತ್ವಿಕ್ ಬಿದ್ದ ಅರ್ಧ ಗಂಟೆಯಲ್ಲಿಯೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಬುಧವಾರ ರಾತ್ರಿಯೇ ಹಿಟಾಚಿ ಮೂಲಕ ಕೊಳವೆಬಾವಿ ಪಕ್ಕದಲ್ಲಿ ಅಡ್ಡವಾಗಿ 3 ಅಡಿ ರಂಧ್ರ ಕೊರೆಯಲಾಗಿತ್ತು. ಆ ರಂಧ್ರದ ಮುಖೇನ ಬಾಲಕ ಬಿದ್ದಿರುವ ಸ್ಥಳಕ್ಕೆ ಹಗ್ಗದ ಸಹಾಯದಲ್ಲಿ ಕ್ಯಾಮೆರಾವೊಂದನ್ನು ಇಳಿಸಲಾಗಿತ್ತು. ಈ ಮೂಲಕ ಬಾಲಕನ ಚಲನವಲನದ ಮೇಲೆ ಕ್ಯಾಮೆರಾ ಮೂಲಕ ನಿಗಾ ಇರಿಸಿ, ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡಲಾಗಿತ್ತು. ಬಾಲಕನ ಕಾಲು ಅಲುಗಾಡುತ್ತಿರುವುದನ್ನು ಕ್ಯಾಮೆರಾ ಮೂಲಕ ಸೆರೆಹಿಡಿದ ಸಿಬ್ಬಂದಿಯು, ಕಾರ್ಯಾಚರಣೆಯನ್ನು ಇನ್ನಷ್ಟು ಕ್ಷಿಪ್ರಗೊಳಿಸಿ, ಕೊನೆಗೆ ಮಗುವನ್ನು ರಕ್ಷಣೆ ಮಾಡಿದ್ದಾರೆ.
ಕೊಳವೆಬಾವಿಯ ಪಕ್ಕದಲ್ಲಿಯೇ ಆಂಬುಲೆನ್ಸ್ ನಿಂತಿದ್ದು, ವೈದ್ಯರು ವೈದ್ಯರು ಬಾಲಕನ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಸುಮಾರು 18 ಗಂಟೆಗೂ ಹೆಚ್ಚು ಕಾಲ ಮಗು ಕೊಳವೆಬಾವಿಯಲ್ಲಿಯೇ ಇದ್ದ ಕಾರಣ ಆತನ ಉಸಿರಾಟ ಸೇರಿ ಹಲವು ರೀತಿಯ ತಪಾಸಣೆ ಮಾಡಲಾಗುತ್ತದೆ. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಮಗುವಿನ ಆರೋಗ್ಯ ತಪಾಸಣೆ ನಡೆದು, ಆರೋಗ್ಯ ದೃಢಪಡಿಸಿಕೊಂಡ ಬಳಿಕವೇ ಮಗುವನ್ನು ಕುಟುಂಬಸ್ಥರಿಗೆ ನೀಡಲಾಗುತ್ತದೆ.