ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ 25 ವರ್ಷದ ಭಾರತೀಯ ವಿದ್ಯಾರ್ಥಿ ಅಮೇರಿಕಾದಲ್ಲಿ ಮೃತದೇಹವಾಗಿ ಪತ್ತೆ
Tuesday, April 9, 2024
ನ್ಯೂಯಾರ್ಕ್: ಅಮೆರಿಕದಲ್ಲಿ ಇತ್ತೀಚೆಗೆ ಭಾರತೀಯ ವಿದ್ಯಾರ್ಥಿಗಳ ಹತ್ಯೆ ನಡೆಯುತ್ತಿದೆ. ಇದೀಗ ಮತ್ತೊಬ್ಬ ಭಾರತೀಯ ಸಾವಿಗೀಡಾಗಿದ್ದಾನೆ. ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ 25 ವರ್ಷದ ವಿದ್ಯಾರ್ಥಿ ಮೃತದೇಹವಾಗಿ ಪತ್ತೆಯಾಗಿದ್ದಾನೆ. ಈ ಒಂದು ವಾರದೊಳಗೆ ಎರಡನೇ ಭಾರತೀಯನ ಸಾವು ಇದಾಗಿದೆ.
ಹೈದರಾಬಾದ್‌ನ ನಾಚಾರಂ ಮೂಲದ ಮೊಹಮ್ಮದ್ ಅಬ್ದುಲ್ ಅರ್ಫಾತ್ ಮೃತ ವಿದ್ಯಾರ್ಥಿ. ಈತ ಕ್ಲೀವ್‌ಲ್ಯಾಂಡ್ ವಿವಿಯಲ್ಲಿ ಐಟಿ ಸ್ನಾತಕೋತ್ತರ ಪದವಿ ಪಡೆಯಲು ಕಳೆದ ವರ್ಷ ಮೇ ನಲ್ಲಿ ಅಮೆರಿಕಕ್ಕೆ ತೆರಳಿದ್ದ.
ಅರ್ಫಾತ್ ಕೊನೆಯದಾಗಿ ಮಾರ್ಚ್ 7ರಂದು ಎಲ್ಲರೊಂದಿಗೆ ಮಾತನಾಡಿದ್ದಾನೆ. ಅಂದಿನಿಂದ ಆತ ಕುಟುಂಬದೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ ಅರ್ಫಾತ್ ತಂದೆ ಮೊಹಮ್ಮದ್ ಸಲೀಮ್ ಹೇಳಿದ್ದಾರೆ. ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಯುಎಸ್‌ನಲ್ಲಿರುವ ಅರ್ಫಾತ್‌ನ ರೂಮ್ ಮೇಟ್‌ಗಳು ಕ್ಲೀವ್‌ಲ್ಯಾಂಡ್ ಪೊಲೀಸರಿಗೆ ಕಾಣೆಯಾದ ಬಗ್ಗೆ ದೂರು ನೀಡಿದ್ದಾಗಿ ತಂದೆಗೆ ತಿಳಿಸಿದ್ದರು.
ಮಾರ್ಚ್ 19ರಂದು ಅರ್ಫಾತ್ ಕುಟುಂಬಕ್ಕೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ಅರ್ಫಾತ್ ಅವರನ್ನು ಡ್ರಗ್ಸ್ ಮಾರಾಟ ಮಾಡುವ ಗ್ಯಾಂಗ್ ಅಪಹರಿಸಿದೆ. ಆತನನ್ನು ಬಿಡುಗಡೆ ಮಾಡಲು 1,200 ಡಾಲರ್‌ಗೆ ಬೇಡಿಕೆಯಿಟ್ಟಿದ್ದರು. ಈ ಹಣವನ್ನು ಪಾವತಿಸದಿದ್ದರೆ ಅರ್ಫಾತ್‌ನ ಕಿಡ್ನಿಗಳನ್ನು ಮಾರಾಟ ಮಾಡುವುದಾಗಿಯೂ ಕರೆ ಮಾಡಿದ ವ್ಯಕ್ತಿ ಬೆದರಿಕೆ ಹಾಕಿದ್ದ ಎಂದು ಆತನ ತಂದೆ ತಿಳಿಸಿದ್ದಾರೆ.
ನನಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಕರೆ ಮಾಡಿದವರು ನನ್ನ ಪುತ್ರನನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಆದರೆ, ಕರೆ ಮಾಡಿದವರು ಹಣ ಪಾವತಿಯ ವಿಧಾನವನ್ನು ಹೇಳಿಲ್ಲ. ಪುತ್ರನೊಂದಿಗೆ ಮಾತನಾಡಲು ಅವಕಾಶ ನೀಡುವಂತೆ ಕೇಳಿದಾಗ ನಿರಾಕರಿಸಿದ್ದರು ಎಂದು ಹೈದರಾಬಾದ್‌ನಲ್ಲಿರುವ ತಂದೆ ಸಲೀಂ ಮಾಹಿತಿ ನೀಡಿದ್ದಾರೆ.
ಕಳೆದ ವಾರವಷ್ಟೇ ಓಹಿಯೋದಲ್ಲಿ ಭಾರತೀಯ ವಿದ್ಯಾರ್ಥಿ ಉಮಾ ಸತ್ಯ ಸಾಯಿ ಸಾವನ್ನಪ್ಪಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.