ಲೈಂಗಿಕ ಕಿರುಕುಳ ಆರೋಪ: ಚೆನ್ನೈ ಕಲಾಕ್ಷೇತ್ರ ಫೌಂಡೇಷನ್ ನ ಮಾಜಿ ಪ್ರಾಧ್ಯಾಪಕ ಅರೆಸ್ಟ್
Wednesday, April 24, 2024
ಚೆನ್ನೈ: ಚೆನ್ನೈ ಕಲಾಕ್ಷೇತ್ರ ಫೌಂಡೇಷನ್ ನ ಮಾಜಿ ಪ್ರಾಧ್ಯಾಪಕ ಶೀಜಿತ್ ಕೃಷ್ಣರನ್ನು ಮಾಜಿ ವಿದ್ಯಾರ್ಥಿಗಳು ಮಾಡಿರುವ ಲೈಂಗಿಕ ಕಿರುಕುಳ ಆರೋಪದಲ್ಲಿ ಮಂಗಳವಾರ ಬಂಧಿಸಲಾಗಿದೆ.
ಖ್ಯಾತ ನೃತ್ಯಗಾರ ಶೀಜಿತ್ ಕೃಷ್ಣ ತಮ್ಮದೇ ಕಲಾಕ್ಷೇತ್ರಕ್ಕೆ ರಾಜಿನಾಮೆ ನೀಡಿ, ನೃತ್ಯ ಅಕಾಡೆಮಿ ಆರಂಭಿಸಿದ್ದರು. ಸದ್ಯ ವಿದೇಶದಲ್ಲಿ ವಾಸವಿರುವ ಮಾಜಿ ವಿದ್ಯಾರ್ಥಿಗಳು ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ, ಶೀಜಿತ್ ಕೃಷ್ಣ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಇವರು 1996ರಿಂದ 2001ರ ಅವಧಿಯಲ್ಲಿ ಕ್ಯಾಂಪಸ್ ನಲ್ಲಿದ್ದ ಸಂದರ್ಭ ಲೈಂಗಿಕ ಕಿರುಕುಳ ನೀಡಿದ್ದರೆಂದು ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನಿಂದ ಚೆನ್ನೈ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿತ್ತು. ಬಂಧನವನ್ನು ದೃಢಪಡಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, "ಶೀಜಿತ್ ತಮ್ಮನ್ನು ಬಳಸಿಕೊಂಡಿದ್ದಾಗಿ ಎಂದು ಮಾಜಿ ವಿದ್ಯಾರ್ಥಿಗಳು ಆಪಾದಿಸಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಬಾರಿ ಹರಿ ಪದ್ಮನ್ ಎಂಬ ಪ್ರಾಧ್ಯಾಪಕರೊಬ್ಬರ ವಿರುದ್ಧ ಇಂಥದ್ದೇ ಆರೋಪ ಬಂದಿತ್ತು. ಆದ್ದರಿಂದ ಅವರನ್ನು ಬಂಧಿಸಿ ವಿಚಾರಣೆ ನಡೆಸಿ, ಅವರನ್ನು ತಪ್ಪಿತಸ್ಥರು ಎಂದು ತನಿಖಾ ಸಮಿತಿ ನಿರ್ಧರಿಸಿದ ಹಿನ್ನೆಲೆಯಲ್ಲಿ ಕಲಾಕ್ಷೇತ್ರ ಫೌಂಡೇಷನ್ ಅವರನ್ನು ವಜಾ ಮಾಡಿತ್ತು.
ಬೋಧಕ ಸಿಬ್ಬಂದಿಯ ಲೈಂಗಿಕ ಕಿರುಕುಳ ವಿರುದ್ಧ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆಡಳಿತ ವರ್ಗ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದನ್ನು ಕಲಾವಿದರು ಖಂಡಿಸಿ, ನ್ಯಾಯಕ್ಕೆ ಮೊರೆ ಹೋಗಿದ್ದರು.