-->
ಉಪ್ಪಿನಂಗಡಿ: ವಧು ತಾಳಿ ಕಟ್ಟಿಸಿಕೊಳ್ಳಲು ಒಲ್ಲದ ಕಾರಣ ಮುರಿದು ಬಿದ್ದ ಮದುವೆ

ಉಪ್ಪಿನಂಗಡಿ: ವಧು ತಾಳಿ ಕಟ್ಟಿಸಿಕೊಳ್ಳಲು ಒಲ್ಲದ ಕಾರಣ ಮುರಿದು ಬಿದ್ದ ಮದುವೆ


ಉಪ್ಪಿನಂಗಡಿ: ವಿವಾಹ ಮಂಟಪದಲ್ಲಿ ವರನಿಂದ ತಾಳಿ ಕಟ್ಟಿಸಿಕೊಳ್ಳಲು ವಧು ನಿರಾಕರಿಸಿದ ಹಿನ್ನೆಲೆಯಲ್ಲಿ  ಮದುವೆ ಮುರಿದು ಬಿದ್ದಿರುವ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಕೊಣಾಲು ಗ್ರಾಮದ ಕೋಲ್ಪೆ ನಿವಾಸಿ ಉಮೇಶ ಎಂಬವರ ವಿವಾಹ ಬಂಟ್ವಾಳ ತಾಲೂಕು ಕುಳ ಗ್ರಾಮದ ಕಂಟ್ರಮಜಲು ಸರಸ್ವತಿಯವರೊಂದಿಗೆ ನಿಗದಿಯಾಗಿತ್ತು. ಎ. 26ರ ಬೆಳಗ್ಗೆ 11.35 ಗಂಟೆಯ ಮುಹೂರ್ತದಲ್ಲಿ ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ವಿವಾಹ ನಡೆದು ಬಳಿಕ ಮಧ್ಯಾಹ್ನ 1 ಗಂಟೆಗೆ ಕೊಲ್ಪೆಯ ವರನ ಮನೆಯಲ್ಲಿ ಸತ್ಕಾರ ಕೂಟ ನಿಗದಿಯಾಗಿತ್ತು.

ಅದರಂತೆ ವರ ಹಾಗೂ ವಧುವಿನ ಕಡೆಯವರು ದೇವಸ್ಥಾನಕ್ಕೆ ಮದುವೆ ದಿಬ್ಬಣದಲ್ಲಿ ಬಂದಿದ್ದರು. ಅದರಂತೆ ವಿವಾಹ ಮಂಟಪಕ್ಕೆ ಬಂದಿದ್ದ ವಧು ಸರಸ್ವತಿ ಹಾಗೂ ವರ ಉಮೇಶ ಪರಸ್ಪರ ಹೂಮಾಲೆ ಹಾಕಿದ್ದಾರೆ. ಇನ್ನೇನು ವರ ಉಮೇಶ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆ ವಧು ಸರಸ್ವತಿ ಈ ಮದುವೆ ತನಗೆ ಇಷ್ಟವಿಲ್ಲವೆಂದು ಹೇಳಿ ತಾಳಿ ಕಟ್ಟಲು ಅವಕಾಶ ನೀಡಲಿಲ್ಲ. ಆದ್ದರಿಂದ ಎರಡೂ ಕಡೆಯವರೂ ವಿಚಲಿತಗೊಂಡು ವಧುವಿನ ಮನವೊಲಿಕೆಗೆ ಮುಂದಾದರೂ ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ್ದಾರೆ. ಆದ್ದರಿಂದ ಎರಡೂ ಕಡೆಯವರೂ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ತೆರಳಿದರು.

ಪೊಲೀಸ್‌ ಠಾಣೆಯಲ್ಲಿ ನಡೆದ ಮಾತುಕತೆ ವೇಳೆ ವಧು ಸರಸ್ವತಿ ತನ್ನಿಂದಾದ ಅಚಾತುರ್ಯಕ್ಕೆ ಪಶ್ಚಾತ್ತಾಪ ಪಟ್ಟು ವರನನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಆಗ ವರ ಉಮೇಶ್‌ ಈ ಮದುವೆಗೆ ನಿರಾಕರಿಸಿದ್ದಾರೆ. ಇದರಿಂದ ಎರಡೂ ಕಡೆಯವರು ಠಾಣೆಯಲ್ಲಿ ಮುಚ್ಚಳಿಕೆ ಬರೆಯಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.

ವರನ ಮನೆಯಲ್ಲಿ ಮದುವೆ ಔತಣ ಕೂಟಕ್ಕೆ ಮಾಂಸಾಹಾರಿ ಊಟದ ಸಿದ್ಧತೆ ಮಾಡಲಾಗಿತ್ತು. ಸುಮಾರು 500 ಮಂದಿಗೆ ಊಟದ ಸಿದ್ಧತೆಯೂ ನಡೆದಿತ್ತು. ಸಾವಿರದಷ್ಟು ಐಸ್‌ ಕ್ರೀಮ್‌ ಸಹ ತರಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಮದುವೆ ರದ್ದಾಗಿರುವುದು ಎರಡೂ ಕಡೆಯವರಿಗೂ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ.

Ads on article

Advertise in articles 1

advertising articles 2

Advertise under the article