ಮಂಗಳೂರು: ಪೆಟ್ರೋಲ್ ಬದಲು ಕಾರಿಗೆ ಡೀಸೆಲ್ ಸುರಿದ ಬಂಕ್ ಸಿಬ್ಬಂದಿ - ನಷ್ಟ ಭರಿಸಲು ಬಂಕ್ ಮಾಲಕರು ನಿರಾಕರಣೆ
Friday, April 19, 2024
ಮಂಗಳೂರು: ಪೆಟ್ರೋಲ್ ಬಂಕ್ ಸಿಬ್ಬಂದಿ ಕಾರಿಗೆ ಪೆಟ್ರೋಲ್ ತುಂಬಿಸುವ ಬದಲು ಡೀಸೆಲ್ ತುಂಬಿಸಿ ಎಡವಟ್ಟು ಮಾಡಿರುವ ಪರಿಣಾಮ ಕಾರು ಇಂಜಿನ್ ಸಂಪೂರ್ಣ ಹಾಳಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ತಮ್ಮ ಸಿಬ್ಬಂದಿಯಿಂದ ಇಂತಹ ಅವಾಂತರ ನಡೆದಿದ್ದರೂ ಪೆಟ್ರೋಲ್ ಬಂಕ್ ಮಾಲಕರು ಮಾತ್ರ ನಷ್ಟ ಭರಿಸಲು ಹಿಂದೇಟು ಹಾಕುತ್ತಿದ್ದಾರೆಂದು ಕಾರು ಮಾಲಕ, ಹೋಟೆಲ್ ಉದ್ಯಮಿ ಜೀವನ್ ಶೆಟ್ಟಿ ಆರೋಪಿಸಿದ್ದಾರೆ.
ನಗರದ ಬಲ್ಮಠದ ಜ್ಯೂಸ್ ಜಂಕ್ಷನ್ ಮುಂಭಾಗದ ಹೆಚ್ ಪಿ ಪೆಟ್ರೋಲ್ ಬಂಕ್ ಗೆ ಎ.5ರಂದು ಮಧ್ಯಾಹ್ನ 12ರ ಸುಮಾರಿಗೆ ಜೀವನ್ ಶೆಟ್ಟಿಯವರು ತಮ್ಮ ಹುಂಡೈ ಐ 10 ಗ್ರ್ಯಾಂಡ್ ಕಾರ್ ಗೆ ಪೆಟ್ರೋಲ್ ತುಂಬಿಸಲು ಬಂದಿದ್ದಾರೆ. ಕ್ಯಾಪ್ ಮೇಲೆ ಪೆಟ್ರೋಲ್ ಎಂದು ಬರೆದಿದ್ದರೂ, ಸಿಬ್ಬಂದಿ ಮಾತ್ರ ಕಾರಿಗೆ ಡೀಸೆಲ್ ತುಂಬಿಸಿದ್ದಾರೆ. ಪರಿಣಾಮ ಕಾರು ಕೆಲವೇ ಕಿ.ಮೀ. ಸಂಚರಿಸಿ ಮುಂದಕ್ಕೆ ಹೋಗದೆ ನಿಂತಿದೆ. ಪರಿಶೀಲನೆ ನಡೆಸಿದಾಗ ಬಂಕ್ ಸಿಬ್ಬಂದಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಪ್ರಶ್ನೆ ಮಾಡಿದರೆ, ಪೆಟ್ರೋಲ್ ಬಂಕ್ ಮ್ಯಾನೇಜರ್ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸಿದ್ದಾರೆ. ಕಾರು ಇಂಜಿನ್ ದುರಸ್ತಿ ಮಾಡಲು 2 ಲಕ್ಷಕ್ಕೂ ಅಧಿಕ ಖರ್ಚು ತಗಲುತ್ತದೆ ಎಂದು ಕಾರು ಶೋರೂಮ್ ನಲ್ಲಿ ಹೇಳಿದ್ದಾರೆ. ಆದರೆ ಪೆಟ್ರೋಲ್ ಬಂಕ್ ಮಾಲಕರು 30 ಸಾವಿರ ಕೊಟ್ಟು ಸುಮ್ಮನಾಗಿದ್ದಾರೆ ಎಂದು ಜೀವನ್ ಶೆಟ್ಟಿ ದೂರಿದ್ದಾರೆ.
ಪೆಟ್ರೋಲ್ ಬಂಕ್ ಸಿಬ್ಬಂದಿ ಅವಾಂತರದಿಂದ ತಮ್ಮ ಕಾರು ಸಂಪೂರ್ಣ ಹಾಳಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಕಡಿಮೆ ಸಂಬಳಕ್ಕೆ ಅನುಭವವಿಲ್ಲದ ಕಾರ್ಮಿಕರನ್ನು ನೇಮಿಸುತ್ತಾರೆ. ಆದರೆ ಸಮಸ್ಯೆಯಾದಾಗ ತಮ್ಮ ಇನ್ಶೂರೆನ್ಸ್ ನಲ್ಲಿ ಪರಿಹಾರ ನೀಡುವ ಅವಕಾಶವಿದ್ದರೂ, ಬಂಕ್ ಮಾಲಕರು ಮಾತ್ರ ಇದಕ್ಕೆ ಹಿಂದೇಟು ಹಾಕುತ್ತಾರೆ. ಆದ್ದರಿಂದ ತಾನು ಪರಿಹಾರಕ್ಕಾಗಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಜೀವನ್ ಶೆಟ್ಟಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.