ಮಂಗಳೂರು: ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ
Thursday, April 18, 2024
ಮಂಗಳೂರು: ಇಲ್ಲಿನ ಉರ್ವ ಚಿಲಿಂಬಿಯಲ್ಲಿರುವ ಸಾಯಿಮಂದಿರದ ಬಳಿ ಚುನಾವಣೆ ಪ್ರಚಾರ ನಡೆಸುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿರುವ ಘಟನೆ ನಡೆದಿದೆ.
ರಾಮನವಮಿಯ ಹಿನ್ನೆಲೆಯಲ್ಲಿ ಸಾಯಿಮಂದಿರದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದ್ದರಿಂದ ಭಕ್ತರ ಸಂಖ್ಯೆಯೂ ಹೆಚ್ಚಿತ್ತು. ಇದೇ ವೇಳೆ, ಮಂದಿರದ ಮುಂಭಾಗದ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದರು. ಇದನ್ನು ಕಂಡ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮಂದಿರದ ಬಳಿ ಪ್ರಚಾರ ನಡೆಸಬಾರದು ಎಂದು ಹೇಳಿದ್ದು ವಾಗ್ವಾದಕ್ಕೆ ಕಾರಣವಾಯಿತು.
ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. "ಮಂದಿರದ ಬಳಿ ಪ್ರಚಾರ ನಡೆಸಬಾರದೆಂದು ಹೇಳಲು ನೀವು ಯಾರು" ಎಂದು ಬಿಜೆಪಿಯವರು ಪ್ರಶ್ನಿಸಿದ್ದಾರೆ. ಆಗ ಕಾಂಗ್ರೆಸ್ ಕಾರ್ಯಕರ್ತರು "ಇಲ್ಲಿ ಪ್ರಚಾರ ಮಾಡಲಿಕ್ಕಿಲ್ಲ. ನಾವು ಮಾಡೋದಿಲ್ಲ. ಮಂದಿರದಲ್ಲಿ ರಾಜಕೀಯ ಇಲ್ಲ" ಎಂದಿದ್ದಾರೆ. "ನಾವು ಮಂದಿರದೊಳಳಗಡೆ ಪ್ರಚಾರ ಮಾಡುತ್ತಿಲ್ಲ. ಹೊರಗಿನಿಂದ ನಾವು ಹೋಗ್ತಾ ಇದ್ದರೆ ನೀವು ಯಾಕೆ ಅಡ್ಡಿ ಬಂದಿದ್ದು" ಎಂದು ವಾಗ್ವಾದ ತಾರಕಕ್ಕೇರಿದೆ. ಹೊಯ್ ಕೈ ಆಗುತ್ತೆ ಎನ್ನುವಾಗ ಶಾಸಕ ವೇದವ್ಯಾಸ ಕಾಮತ್ ಮತ್ತು ಕಾಂಗ್ರೆಸ್ ಮುಖಂಡ ಮಿಥುನ್ ರೈ ಸ್ಥಳಕ್ಕಾಗಮಿಸಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದು ದೂರಕ್ಕ ಕಳಿಸಿದ್ದಾರೆ.
ಈ ವೇಳೆ ಡಿಸಿಪಿ ಸಿದ್ದಾರ್ಥ್ ಗೋಯಲ್, ಉರ್ವ ಇನ್ಸ್ ಪೆಕ್ಟರ್ ಭಾರತಿ ಸ್ಥಳಕ್ಕೆ ಬಂದು ಸೇರಿದ್ದ ಜನರನ್ನು ಚದುರಿಸುವ ಕೆಲಸ ಮಾಡಿದ್ದಾರೆ. ಕೆಲಹೊತ್ತು ಚಿಲಿಂಬಿಯಲ್ಲಿ ಜನ ಸೇರಿದ್ದರಿಂದ ವಾಗ್ವಾದ, ಹೊಡೆದಾಟಕ್ಕೆ ಕಾರಣವಾಗುತ್ತಾ ಅನ್ನುವ ಸ್ಥಿತಿ ಉಂಟಾಗಿತ್ತು.