ಸುಬ್ರಹ್ಮಣ್ಯ: ಪುಳಿಕುಕ್ಕು ಸೇತುವೆಯ ಕೆಳಭಾಗದಲ್ಲಿ ಮೊಸಳೆ ಕಳೇಬರ ಪತ್ತೆ
Saturday, April 13, 2024
ಸುಬ್ರಹ್ಮಣ್ಯ: ಇಲ್ಲಿನ ಕುಮಾರಧಾರಾ ನದಿಯ ಪಂಜ – ಕಡಬ ಸಂಪರ್ಕ ರಸ್ತೆಯ ಬಳಿಯಿರುವ ಪುಳಿಕುಕ್ಕು ಸೇತುವೆಯ ಕೆಳಭಾಗದಲ್ಲಿ ಮೊಸಳೆಯೊಂದರ ಕಳೇಬರ ಶುಕ್ರವಾರ ಪತ್ತೆಯಾಗಿದೆ.
ಕುಮಾರಧಾರ ನದಿಯಲ್ಲಿ ಅಂದಾಜು 1.5 – 2 ವರ್ಷದೊಳಗಿನ ಮೊಸಳೆಯ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಈ ಮೊಸಳೆಯು ಗುರುವಾರ ಹಗಲು ಆಥವಾ ರಾತ್ರಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸಾಮಾನ್ಯವಾಗಿ ಮೊಸಳೆಗಳು 50ರಿಂದ 60 ವರ್ಷದವರೆಗೆ ಜೀವಿಸುತ್ತದೆ. ಆದರೆ ಇಲ್ಲಿ ಮೃತಪಟ್ಟಿರುವುದು ಕೇವಲ 2 ವರ್ಷ ಒಳಗಿನದ್ದು. ನದಿಯಲ್ಲಿ ನೀರಿನ ಹರಿವು ಕುಂಠಿತಗೊಂಡಿದ್ದು, ಅಲ್ಲಲ್ಲಿ ಸಂಗ್ರಹವಾಗಿರುವ ನೀರು ಸೂರ್ಯನ ಪ್ರಖರತೆಗೆ ಬಿಸಿಯಾಗಿ ಸಾವನ್ನಪ್ಪಿರಬಹುದೇ ಅಥವಾ ನೀರು ಕಲುಷಿತಗೊಂಡು ಮೃತಪಟ್ಟಿರಬಹುದೇ ಎಂಬ ಶಂಕೆಯನ್ನು ಜನಸಾಮಾನ್ಯ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪಂಜ ವಲಯ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿ ಅಗಮಿಸಿ ಮೃತದೇಹವನ್ನು ತೆರವು ಮಾಡಿದ್ದಾರೆ.