ಬಂಟ್ವಾಳ: ದಿಢೀರ್ ನಾಪತ್ತೆಯಾಗಿದ್ದ ಅಮ್ಟಾಡಿ ಗ್ರಾಪಂ ಕಾರ್ಯದರ್ಶಿ ನದಿಯಲ್ಲಿ ಮೃತದೇಹವಾಗಿ ಪತ್ತೆ
Monday, April 1, 2024
ಬಂಟ್ವಾಳ: ಕಳೆದ ಆರು ದಿನಗಳ ಹಿಂದೆ ದಿಢೀರೆಂದು ನಾಪತ್ತೆಯಾಗಿದ್ದ ಅಮ್ಟಾಡಿ ಗ್ರಾಪಂ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಅವರು ಧರ್ಮಸ್ಥಳ ಬಳಿಯ ಪಟ್ರಮೆ ಎಂಬಲ್ಲಿ ನದಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ.
ಚುನಾವಣಾ ಕರ್ತವ್ಯದಲ್ಲಿದ್ದ ಇವರು, ಮಾ.27ರಂದು ಕರ್ತವ್ಯಕ್ಕೆ ಹಾಜರಾಗದೆ ಏಕಾಏಕಿ ನಾಪತ್ತೆಯಾಗಿದ್ದರು. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆಗಿಳಿದಾಗ ಲಕ್ಷ್ಮೀನಾರಾಯಣ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಚುನಾವಣೆ ಕರ್ತವ್ಯದ ಎಸ್ ಎಸ್ ಟಿ ತಂಡದಲ್ಲಿದ್ದ ಇವರು ಅದಕ್ಕೂ ಮೊದಲು ಒಂದು ಬಾರಿ ಇದೇ ರೀತಿ ಮಿಸ್ಸಿಂಗ್ ಆಗಿದ್ದರು. ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದರು.
ಆರು ದಿನಗಳ ಹಿಂದೆ ಅವರು ನಾಪತ್ತೆಯಾದ ಬಳಿಕ ಬೆಳ್ತಂಗಡಿಯಲ್ಲಿ ಅವರ ಬೈಕ್ ಪತ್ತೆಯಾಗಿತ್ತು. ಪೊಲೀಸರು ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿದಾಗ ಪಟ್ರಮೆಯಲ್ಲಿ ಕಂಡುಬಂದಿದೆ. ಆದ್ದರಿಂದ ಆ ಪರಿಸರದಲ್ಲಿ ಹುಡುಕಾಟ ನಡೆಸಿದಾಗ ಪಟ್ರಮೆ ಹೊಳೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.