ರೈಲಿಗೆ ಸಿಲುಕಿ ಮೂವರು ಯುವಕರ ದಾರುಣ ಸಾವು: ಛಿದ್ರವಾದ ಮೃತದೇಹಗಳು
Thursday, April 25, 2024
ಬೆಂಗಳೂರು: ಸಂಚರಿಸುತ್ತಿದ್ದ ರೈಲಿಗೆ ಸಿಲುಕಿ ಮೂವರು ಯುವಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ನಗರದ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಶಶಿಕುಮಾರ್, ಲೋಕೇಶ್, ಮತ್ತೋರ್ವ 25 ವರ್ಷ ಆಸುಪಾಸಿನ ಯುವಕ ಮೃತಪಟ್ಟವರು ಎಂದು ತಿಳಿದು ಬಂದಿದೆ. ಮೃತಪಟ್ಟ ಮತ್ತೋರ್ವನ ಗುರುತು ಪತ್ತೆಯಾಗದ ಕಾರಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರೈಲ್ವೆ ಎಎಸ್‌ಪಿ ಡಾ. ಸೌಮ್ಯಲತಾ, ಗುರುವಾರ ಮುಂಜಾನೆ ಸ್ಥಳೀಯರು ಮೃತದೇಹಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಛಿದ್ರವಾಗಿದ್ದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಬುಧವಾರ ರಾತ್ರಿ 8:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಯಶವಂತಪುರ ಕಣ್ಣೂರು ಎಕ್ಸೆಸ್ ರೈಲು ಪಾಸ್ ಆಗುವ ವೇಳೆ ಅಡ್ಡಬಂದಿದ್ದಾರೆ. ಮಾರತ್ತಹಳ್ಳಿ ಬ್ರಿಡ್ಜ್ ಪಕ್ಕದಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟ ಮೂವರು ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ದರು ಎಂದು ತಿಳಿದು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ.