ಮಂಗಳೂರು: ರೋಡ್ ಶೋನಲ್ಲಿ ಕೈಬೀಸಿದ ಮೋದಿ - ಪ್ರಧಾನಿಗೆ ಜೈಕಾರ, ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ
Sunday, April 14, 2024
ಮಂಗಳೂರು: ಲೋಕಸಭೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರತೊಡಗಿದ್ದು, ಇಂದು ಪ್ರಧಾನಿ ಮೋದಿಯವರು ಮಂಗಳೂರಿನಲ್ಲಿ ಅಬ್ಬರದ ರೋಡ್ ಶೋ ನಡೆಸುವ ಮೂಲಕ ಕೇಸರಿ ಪಾಳಯದಲ್ಲಿ ಆನೆಬಲ ಮೂಡಿದಂತಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದ ಮೋದಿಯವರು ರಸ್ತೆ ಮಾರ್ಗವಾಗಿ ಆಗಮಿಸಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತಕ್ಕೆ (ಲೇಡಿಹಿಲ್) ಆಗಮಿಸಿದ್ದಾರೆ. ಮೋದಿ ಬಂದ ತಕ್ಷಣ ಜಿಲ್ಲೆಯ ನಾಯಕರ ಕೈಕುಲುಕಿದ್ದಾರೆ. ಬಳಿಕ ಸರ್ಕಲ್ ನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಜನರತ್ತ ಕೈಬೀಸಿ ಮೋಡಿ ಮಾಡುದರು. ಈ ವೇಳೆ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಬಳಿಕ ಉಡುಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ದೊಡ್ಡದಾದ ರುದ್ರಾಕ್ಷಿ ಮಾಲೆ ಹಾಕಿದರು. ಸಂಸದ ನಳಿನ್ ಕುಮಾರ್ ಕಟೀಲು ಕೇಸರಿ ಶಾಲು ಹಾಕಿದರು. ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟ ದೇವರ ಪ್ರಭಾವಳಿಯ ಪ್ರತಿಕೃತಿ ನೀಡಿದರು. ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪೇಟಾ ತೊಡಿಸಿದರು.
ಮೋದಿ ಆಗಮನದ ವೇಳೆ ತುಳುನಾಡಿನ ಸಾಂಪ್ರದಾಯಿಕ ಕಹಳೆ, ಚೆಂಡೆಯ ನಿನಾದದೊಂದಿಗೆ 10 ಮಂದಿಯಿಂದ ಶಂಖನಾದದ ಸ್ವಾಗತ ಕೋರಲಾಯಿತು. ಅಲ್ಲದೆ 12 ತಂತ್ರಿಗಳಿಂದ ವೇದಘೋಷ ಮೊಳಗಿತು. ಬಳಿಕ ಮೋದಿಯವರು ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಅಭ್ಯರ್ಥಿಗಳಾದ ಕೋಟ ಹಾಗೂ ಚೌಟರೊಂದಿಗೆ ತೆರೆದ ವಾಹನವೇರಿ ರೋಡ್ ನಲ್ಲಿ ಭಾಗವಹಿಸಿದರು. ಈ ವೇಳೆ ರೋಡ್ ಶೋನಲ್ಲಿ ಭಾಗವಹಿಸಿದ ಕಾರ್ಯಕರ್ತರತ್ತ ಮೋದಿ ಕೈ ಬೀಸಿದರು. ಕಾರ್ಯಕರ್ತರ ಹರ್ಷೋದ್ಘಾರ ಮುಗಿಲುಮುಟ್ಟಿತು. ಜೊತೆಗೆ ಮೋದಿಯತ್ತ ಎಲ್ಲರೂ ಸುಮ ವರ್ಷ ಮಾಡಿದರು. ರೋಡ್ ಶೋ ನಾರಾಯಣ ಗುರು ವೃತ್ತದಿಂದ ಆರಂಭವಾದ ರೋಡ್ ಶೋ ಲಾಲ್ ಭಾಗ್, ಬಲ್ಲಾಳ್ ಭಾಗ್, ಪಿವಿಎಸ್ ನತ್ತ ಸಾಗಿ ನವಭಾರತ್ ಸರ್ಕಲ್ ಗೆ ಆಗಮಿಸಿ ಸಮಾಪ್ತಿಗೊಂಡಿತು.
ನಾರಾಯಣ ಗುರು ವೃತ್ತದಿಂದ ನವಭಾರತ್ ಸರ್ಕಲ್ ವರೆಗೆ ಇಕ್ಕೆಲಗಳಲ್ಲಿ ನಿಂತಿರುವ ಸಾವಿರ ಸಾವಿರ ಮಂದಿ ಕಾರ್ಯಕರ್ತರು, ಮೋದಿ ಅಭಿಮಾನಿಗಳಿಗೆ ಮೋದಿ ಕೈ ಬೀಸಿ ಮೋಡಿ ಮಾಡಿದರು. ಪ್ರಧಾನಿ ಮೋದಿಯವರನ್ನು ಕಂಡ ಕಾರ್ಯಕರ್ತರಿಂದ ಹರ್ಷೋದ್ಘಾರ ಮೊಳಗಿಸಿ ಸಂಭ್ರಮಿಸಿದರು. ಪುಟ್ಟಪುಟ್ಟ ಮಕ್ಕಳಿಂದ ಹಿಡಿದು ಹಿರಿಯರ ತನಕ ಮೋದಿಯವರನ್ನು ಹತ್ತಿರದಿಂದ ಕಂಡು ಸಂಭ್ರಮಿಸಿದರು. ರೋಡ್ ಶೋ ನಡೆದ ಉದ್ದಕ್ಕೂ ಬಿಜೆಪಿ ಬಾವುಟಗಳು, ಕೇಸರಿ ಧ್ವಜಗಳು ರಾರಾಜಿಸಿತು. ಜೊತೆಗೆ ಕಮಲದ ಫ್ಲಕ್ ಕಾರ್ಡ್ ಗಳನ್ನು ಹಿಡಿದ ಕಾರ್ಯಕರ್ತರು ಮೋದಿಯತ್ತ ತೋರಿಸಿ
ಸಂಜೆ 5 ಗಂಟೆಯಿಂದಲೇ ಜನರು ರೋಡ್ ಶೋ ನಡೆಯುವಲ್ಲಿಗೆ ರಾತ್ರಿ 9 ಗಂಟೆಯವರೆಗೆ ಪ್ರಧಾನಮಂತ್ರಿಗಳನ್ನು ನೋಡಲು ಕಾದ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದರು. ರೋಡ್ ಶೋ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 2000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣ ಹಾಗೂ ಮೋದಿ ರೋಡ್ ಶೋ ನಡೆಸುವ ಸ್ಥಳದಲ್ಲಿ ಈ ಪೊಲೀಸ್ ಅಧಿಕಾರಿ/ಸಿಬ್ಬಂದಿ ವರ್ಗವು ಬಂದೋಬಸ್ತ್ ನಡೆಸಿದ್ದಾರೆ.
ಎಸ್ ಪಿ ಜಿ ಅಧಿಕಾರಿಗಳು ನಗರದೆಲ್ಲೆಡೆ ವಿಶೇಷ ನಿಗಾ ವಹಿಸಿದ್ದರು. ರೋಡ್ ಶೋ ನಡೆಯುವ ರಸ್ತೆಯುದ್ದಕ್ಕೂ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿತ್ತು. ರೋಡ್ ಶೋ ನಲ್ಲಿ ಹಲವು ಬಗೆಯ ಕಲಾ ಪ್ರಕಾರಗಳು ಗಮನಸೆಳೆದವು. ಲಾಲ್ ಭಾಗ್ ನಲ್ಲಿ ಹುಲಿವೇಷ ಕುಣಿತ, ಬಳ್ಳಾಲ್ ಭಾಗ್ ಬಳಿ ಭರತನಾಟ್ಯ, ಘಟೋದ್ಗಚ, ಹನುಮಂತ ವೇಷಧಾರಿಗಳು, ದೀಪಾ ಕಂಪರ್ಟ್ ಬಳಿ ವಯಲಿನ್ ಜೊತೆಗೆ ಕುಣಿತ ಭಜನೆ, ಬಿಜೆಪಿ ಕಚೇರಿ ಬಳಿ ಮಹಿಷ ವಧೆ ಯಕ್ಷಗಾನ ಗಮನಸೆಳೆಯಿತು. ರೋಡ್ ಶೋ ಆರಂಭದಿಂದ ಸಮಾಪ್ತಿಯಾಗುವವರೆಗೆ ಪ್ರಧಾನಿಯವರು ವ್ಯವಸ್ಥೆ ಮಾಡಲಾಗಿದ್ದ ಕಲಾಪ್ರಕಾರಗಳನ್ನು ವೀಕ್ಷಿಸಿದರು.