ಅಪಾಯಕಾರಿ ಶ್ವಾನಗಳ ಸಾಕಾಣಿಕೆ ನಿಷೇಧದವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ
Thursday, April 11, 2024
ಮಾನವರ ಜೀವಕ್ಕೆ ಅಪಾಯಕಾರಿ ಎನ್ನಲಾಗಿರುವ ಪಿಟ್‌ಬುಲ್ ಟೆರಿಯರ್, ಅಮೆರಿಕನ್ ಬುಲ್‌ಡಾಗ್, ಕಂಗಾಲ್, ರಷ್ಯನ್ ಶೆಫರ್ಡ್ ಸೇರಿದಂತೆ 20ಕ್ಕೂ ಹೆಚ್ಚು ಶ್ವಾನ ತಳಿಗಳ ಮಾರಾಟ, ಸಾಕಾಣಿಕೆ ಹಾಗೂ ಅವುಗಳ ಸಂತಾನೋತ್ಪತ್ತಿಗೆ ನಿಷೇಧ ಹೇರಿ ಕೇಂದ್ರ ಪಶು ಸಂಗೋಪನೆ ಇಲಾಖೆ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಕೇಂದ್ರದ ಆದೇಶವನ್ನು ಪ್ರಶ್ನಿಸಿ, ಬೆಂಗಳೂರಿನ ಕಿಂಗ್ ಸೋಲ್ಮನ್ ಡೇವಿಡ್ ಹಾಗೂ ಮರ್ಡೋನಾ ಜಾನ್ ಎಂಬುವರು ಸಲ್ಲಿಸಿದ್ದ ಆಕ್ಷೇಪಾರ್ಹ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರುಳ್ಳ ಪೀಠ, ಕೇಂದ್ರದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಏ. 6ರಂದು ಇದೇ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮುಂದುವರಿಸಿತ್ತು. ಏ. 10ರಂದು ಈ ಪ್ರಕರಣದ ತೀರ್ಪು ನೀಡಿರುವ ಹೈಕೋರ್ಟ್, ಕೇಂದ್ರ ಸರ್ಕಾರ ಮಾ. 12ರಂದು ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಗೊಳಿಸಿದೆ.
ಕೇಂದ್ರ ಸರ್ಕಾರ ಕೈಗೊಂಡಿದ್ದ ನಿರ್ಧಾರಕ್ಕೆ ಕಾರಣವೇನು
ದೇಶದಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಪಾಯಕಾರಿಯಾದ ಶ್ವಾನ ತಳಿಗಳನ್ನು ನಿಷೇಧಿಸುವಂತೆ ಖ್ಯಾತ ಪ್ರಾಣಿ ದಯಾ ಸಂಘ (ಪೆಟಾ) ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗೆ ಸಲ್ಲಿಸಿತ್ತು. ಆದರೆ, ಆ ಮನವಿಯನ್ನು ಸ್ವೀಕರಿಸಲು ನಿರಾಕರಿಸಿದ್ದ ದೆಹಲಿ ಹೈಕೋರ್ಟ್, ಮೊದಲು ಈ ಕುರಿತಂತೆ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕು. ಅಲ್ಲಿ ಈ ವಿಚಾರ ಇತ್ಯರ್ಥವಾಗದಿದ್ದ ಪಕ್ಷದಲ್ಲಿ ನ್ಯಾಯಾಲಯಕ್ಕೆ ಬರಬಹುದು. ಸರ್ಕಾರವನ್ನು ಸಂಪರ್ಕಿಸದೇ ನೇರವಾಗಿ ನ್ಯಾಯಾಲಯಕ್ಕೆ ಬರುವುದು ಸರಿಯಲ್ಲ ಎಂದು ಹೇಳಿತ್ತು. ಆ ಹಿನ್ನೆಲೆಯಲ್ಲಿ ಪೆಟಾ ಸಂಸ್ಥೆಯು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿತ್ತು.
ಅದರಂತೆ, ಮಾ. 13ರಂದು ಸಾರ್ವಜನಿಕ ಸುತ್ತೋಲೆ ಹೊರಡಿಸಿದ್ದ, ಕೇಂದ್ರ ಪಶುಸಂಗೋಪನಾ ಇಲಾಖೆ, ಜನರು ಬಹುದಿನಗಳಿಂದ ಸಲ್ಲಿಸುತ್ತಿದ್ದ ಮನವಿಯ ಆಧಾರದ ಮೇರೆಗೆ ಹಾಗೂ ಪೆಟಾ ಸಂಸ್ಥೆ ಸಲ್ಲಿಸಿರುವ ಮನವಿಯ ಆಧಾರದ ಮೇರೆಗೆ ದೇಶದಲ್ಲಿರುವ 23 ಅಪಾಯಕಾರಿ ಶ್ವಾನ ತಳಿಗಳನ್ನು ಮಾರಾಟ ಮಾಡುವುದು, ಅವುಗಳನ್ನು ಪೋಷಿಸುವುದು ಹಾಗೂ ಅವುಗಳ ಸಂತಾನೋತ್ಪತ್ತಿ ಮಾಡುವುದಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದಾಗಿ ತಿಳಿಸಿತ್ತು.
ಮಾ 12ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ ಪಿಟ್‌ಬುಲ್ ಟೆರಿಯರ್, ಟೋಸಾ ಇನು, ಅಮೆರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೊ, ಅಮೆರಿಕನ್ ಬುಲ್‌ಡಾಗ್, ರಷ್ಯನ್ ಶೆಫರ್ಡ್, ಟೊರ್ನ್‌ಜಾಕ್, ಸಪ್‌ರ್‍ಲಾನಿನಾಕ್, ಜಪಾನೀಸ್ ಟೋಸಾ ಮತ್ತು ಅಕಿಟಾ, ಮಾಸ್ಟಿಫ್, ರಾಟ್‌ವೀಲರ್, ಟೆರಿಯರ್‌ಗಳು ರಿಡ್ಜ್‌ಬ್ಯಾಕ್, ಬೋರ್‌ಬೋಯಲ್, ಕಂಗಾಲ್, ವೂಲ್ಫ್ ಡಾಗ್ಸ್, ಕೆನರಿಯೊ, ಅಕ್ಬಾಶ್, ಮಾಸ್ಕೊ ಗಾರ್ಡ್ , ಕೇನ್ ಕೊರ್ಸೊ ಶ್ವಾನ ತಳಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.