ರಾಮೇಶ್ವರ ಸ್ಫೋಟ ಪ್ರಕರಣ : ತೀರ್ಥಹಳ್ಳಿ ಬಿಜೆಪಿ ಘಟಕದ ಕಾರ್ಯದರ್ಶಿಯನ್ನು ವಶಕ್ಕೆ ತೆಗೆದುಕೊಂಡ ಎನ್ಐಎ ಅಧಿಕಾರಿಗಳು
Friday, April 5, 2024
ಬೆಂಗಳೂರು: ರಾಮೇಶ್ವರ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ತೀರ್ಥಹಳ್ಳಿ ಮೂಲದ ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ ಪಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಬಿಜೆಪಿ ಘಟಕದ ಕಾರ್ಯದರ್ಶಿ ಸಾಯಿಪ್ರಸಾದ್ ನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ. ಮೊಬೈಲ್ ಅಂಗಡಿಯೊಂದಕ್ಕೆ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳಿಗೆ ಅದರ ಮಾಲಕನಿಗೂ ಸಾಯಿಪ್ರಸಾದ್ ಗೂ ಸಂಪರ್ಕ ಇರುವುದು ತಿಳಿದುಬಂದಿತ್ತು. ಆದ್ದರಿಂದ ಸಾಯಿಪ್ರಸಾದ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಬೆಂಗಳೂರಿಗೆ ಒಯ್ದಿದ್ದಾರೆ.
ಮಾ.1ರಂದು ನಡೆದಿರುವ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಮೂಲದ ಮುಸಾವಿರ್ ಮತ್ತು ಅಬ್ದುಲ್ ಮತೀನ್ ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿದೆ. ಈ ಬಗ್ಗೆ ಸುಳಿವು ನೀಡಿದವರಿಗೆ ತಲಾ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಇದಲ್ಲದೆ, ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದ ಮುಜಾಮಿಲ್ ಎಂಬಾತನನ್ನು ಬಂಧಿಸಿದ್ದು, ಆತನೇ ಬಾಂಬ್ ಸ್ಫೋಟದ ಕಚ್ಚಾ ಸಾಮಗ್ರಿಯನ್ನು ಪೂರೈಸಿದ್ದ ಎಂದು ಆರೋಪಿಸಲಾಗಿದೆ. ಇದೀಗ ಪ್ರಕರಣದಲ್ಲಿ ಬಿಜೆಪಿ ತೀರ್ಥಹಳ್ಳಿ ಘಟಕದ ಕಾರ್ಯದರ್ಶಿಯನ್ನು ಬಂಧಿಸಿರುವುದು ಭಾರೀ ಕುತೂಹಲಕ್ಕೀಡು ಮಾಡಿದೆ.