ರೌಡಿಗಳೊಂದಿಗೆ ಹಣದ ವ್ಯವಹಾರದ ಆರೋಪ: ಮಂಗಳೂರು ಬರ್ಕೆಯಲ್ಲಿ ಇನ್ ಸ್ಪೆಕ್ಟರ್ ಆಗಿದ್ದ ಜ್ಯೋತಿರ್ಲಿಂಗ ಬೆಂಗಳೂರಿನಲ್ಲಿ ಸಸ್ಪೆಂಡ್
Sunday, April 21, 2024
ಬೆಂಗಳೂರು: ರೌಡಿಗಳೊಂದಿಗೆ ಹಣದ ವ್ಯವಹಾರದ ಆರೋಪದಲ್ಲಿ ಬೆಂಗಳೂರು ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿಯವರನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕೆಲದಿನಗಳ ಹಿಂದೆ ಲೋಕಸಭೆಯ ಚುನಾವಣೆ ಹಿನ್ನೆಲೆಯಲ್ಲಿ ಮಾರತ್ತಹಳ್ಳಿ ರೌಡಿ ರೋಹಿತ್‌ನನ್ನು ವಿಚಾರಣೆ ನಡೆಸಲಾಗಿತ್ತು. ಆಗ ಖಾಕಿ ನಂಟು ಬಯಲಾಗಿತ್ತು. ಇಲಾಖಾ ಮಟ್ಟದ ವಿಚಾರಣೆ ನಡೆಸಿದ ಸಿಸಿಬಿ ಡಿಸಿಪಿ, ಸಿಸಿಬಿ ಒಸಿಡಬ್ಲ್ಯು ದಳದ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ್ದರು.
ಸಿಸಿಬಿಯ ಒಸಿಡಬ್ಲ್ಯು ದಳದ ಪೂರ್ವ ವಿಭಾಗದಲ್ಲಿ ಜ್ಯೋರ್ತಿಲಿಂಗ ಕಾರ್ಯ ನಿರ್ವಹಿಸುತ್ತಿದ್ದರು. ಮಾರತ್ತಹಳ್ಳಿ ರೌಡಿ ರೋಹಿತ್ ಮೇಲೆ ಕೋಲೆ ಹಾಗೂ ಜೀವ ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಲೋಕಸಭಾ ಚುನಾವಣಾ ನಿಮಿತ್ತ ನಗರದ ರೌಡಿಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದರು. ಅಲ್ಲದೆ ರೌಡಿಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ ಶೋಧ ಮಾಡಿದ್ದರು.
ಆದರೆ ರೋಹಿತ್ ಪತ್ತೆಯಾಗಿರಲಿಲ್ಲ. ರೋಹಿತ್ ನನ್ನು ಕರೆದು ವಿಚಾರಣೆ ನಡೆಸುವಂತೆ ಅಧಿಕಾರಿಗಳಿಗೆ ಸಿಸಿಬಿ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ಸೂಚಿಸಿದ್ದರು. ಅದರಂತೆ ಆತನನ್ನು ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಕರೆಸಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ರೌಡಿ ಮೊಬೈಲನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಇನ್ಸ್ ಪೆಕ್ಟರ್ ಜ್ಯೋತಿರ್ಲಿಂಗರೊಂದಿಗೆ ನಿಕಟ ನಂಟು ಇರುವುದು ಬೆಳಕಿಗೆ ಬಂದಿತ್ತು. ಹಲವು ಬಾರಿ ಪಿಐ ಜ್ಯೋತಿರ್ಲಿಂಗ ಅವರಿಗೆ ರೌಡಿ ರೋಹಿತ್ ಹಣ ಕೊಟ್ಟಿರುವುದು ತಿಳಿದುಬಂದಿದ್ದು ಅದರಂತೆ ಡಿಸಿಪಿ ವರದಿ ಆಧರಿಸಿ ಬೆಂಗಳೂರು ಕಮಿಷನರ್ ಅಮಾನತು ಆದೇಶ ಮಾಡಿದ್ದಾರೆ. ಜ್ಯೋತಿರ್ಲಿಂಗ ಈ ಹಿಂದೆ ಮಂಗಳೂರಿನ ಬರ್ಕೆ ಠಾಣೆಯಲ್ಲಿ ಇನ್ ಸ್ಪೆಕ್ಟರ್ ಆಗಿದ್ದರು. ಈ ಸಂದರ್ಭವೂ ಅವರ ಮೇಲೆ ಹಣದ ಆರೋಪ ಕೇಳಿ ಬಂದಿತ್ತು.