ಪೆನ್ ಡ್ರೈವ್ ವೈರಲ್ ಪ್ರಕರಣ - ಎಸ್‌ಐಟಿಯಿಂದ ಇಬ್ಬರು ಬಿಜೆಪಿ ಕಾರ್ಯಕರ್ತರು ಅರೆಸ್ಟ್ - ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ
Monday, May 13, 2024
ಹಾಸನ : ಅಶ್ಲೀಲ ವೀಡಿಯೋ ಪೆನ್ ಡ್ರೈವ್ ವೈರಲ್ ಪ್ರಕರಣದಲ್ಲಿ ಎಸ್‌ಐಟಿ ತಂಡ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದೆ.
ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅವರ ಕಚೇರಿ ಸಿಬ್ಬಂದಿ ಚೇತನ್ ಹಾಗೂ ಪ್ರೀತಂಗೌಡ ಆಪ್ತ ಲಿಖಿತ್ ಗೌಡ ಎಂಬವರನ್ನು ಬಂಧಿಸಲಾಗಿದೆ. ಶನಿವಾರ ಮಧ್ಯರಾತ್ರಿ ಇವರಿಬ್ಬರನ್ನು ಎಸ್‌ಐಟಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ.
ಚೇತನ್ ಹಾಸನ ತಾಲೂಕಿನ ಯಲಗುಂದ ಗ್ರಾಮದವನಾಗಿದ್ದು, ಆತನ ಮನೆಯಲ್ಲಿ ಇನ್ ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಎಸ್ ಐ ಟಿಯಿಂದ ಸ್ಥಳ ಮಹಜರ್ ನಡೆಸಿದೆ. ಮತ್ತೊಂದೆಡೆ ಶ್ರವಣಬೆಳಗೊಳದಲ್ಲಿ ಲಿಖಿತ್ ಮನೆಯಲ್ಲಿ ಸ್ಥಳ ಮಹಜರ್ ನಡೆದಿದೆ. ಈ ಮೂಲಕ ವೀಡಿಯೋ ವೈರಲ್ ಪ್ರಕರಣ ಚುರುಕುಗೊಂಡಿದೆ. ಪ್ರಕರಣದಲ್ಲಿ ನವೀನ್ ಮತ್ತು ಪುಟ್ಟುರಾಜು ಎಂಬುವವರ ಹೆಸರು ಕೇಳಿಬಂದಿದ್ದು, ಅಧಿಕಾರಿಗಳು ಇವರಿಬ್ಬರಿಗಾಗಿ ಹುಡುಕಾಡುತ್ತಿದ್ದಾರೆ.
ಈ ಮೂಲಕ ಹಾಸನದಲ್ಲಿ ಅಶ್ಲೀಲ ವೀಡಿಯೋ ಹೊಂದಿದ್ದ ಪೆನ್ ಡ್ರೈವ್ ವೈರಲ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೆನ್ ಡ್ರೈವ್ ಇಟ್ಟುಕೊಂಡಿದ್ದ ಆರೋಪದಲ್ಲಿ ಇಬ್ಬರ ವಶಕ್ಕೆ ಪಡೆದಿದ್ದು, ಪೆನ್ ಡ್ರೈವ್ ವೈರಲ್ ಸಂಬಂಧ ದಾಖಲಾಗಿರೊ ಕೇಸ್ ನಲ್ಲಿ ಹೆಸರೇ ಇಲ್ಲದ ಇಬ್ಬರನ್ನು ವಶಕ್ಕೆ ಪಡೆದಂತಾಗಿದೆ. ಈ ಇಬ್ಬರಿಗೂ ಮೇ 25ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹಾಸನದ ನಗರ ಪೊಲೀಸ್ ಠಾಣೆ ಸಮಚ್ಚಯದಲ್ಲಿರೊ ಸೈಬರ್ ಕ್ರೈಂ ಠಾಣೆಯಲ್ಲಿ ಇಬ್ಬರ ವಿಚಾರಣೆ ನಡೆಯುತ್ತಿದ್ದು, ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಶ್ಲೀಲ ವಿಡಿಯೋ ಹಾಸನದಲ್ಲಿ ಹರಿದಾಡುತ್ತಿದ್ದಂತೆಯೇ ಏಪ್ರಿಲ್ 23ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿನಾಶ ಮತ್ತು ಅಪಹರಣ ಕೇಸಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಜೈಲಿನಲ್ಲಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ 16 ದಿನಗಳಿಂದ ನಾಪತ್ತೆಯಾಗಿದ್ದಾರೆ.