Mangalore-ಮೆಡಿಕಲ್ ಕಾಲೇಜು ಲೇಡಿಸ್ ಟಾಯ್ಲೆಟ್ ನಲ್ಲಿ ರಹಸ್ಯ ಮೊಬೈಲ್ ಇಟ್ಟು ಚಿತ್ರೀಕರಣ- 17 ವರ್ಷದ ಅಪ್ರಾಪ್ತ ವಶಕ್ಕೆ
ಮಂಗಳೂರು: ನಗರದ ಬಾವುಟಗುಡ್ಡ ಮುಲ್ಕಿ ಸುಂದರರಾಮ್ ಶೆಟ್ಟಿ ರಸ್ತೆಯ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ಲೇಡೀಸ್ ಟಾಯ್ಲೆಟ್ ನಲ್ಲಿ ರಹಸ್ಯವಾಗಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡಲಾಗಿದೆ ಎಂದು ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಸೆಕ್ಯುರಿಟಿ ಫೀಲ್ಡ್ ಮ್ಯಾನೇಜರ್ ರಾಜು ಅವರಿಗೆ ಮೇ 06ರಂದು ಸಂಜೆ ಸುಮಾರು 3:30ರ ಸುಮಾರಿಗೆ ಒಂದನೇ ಮಹಡಿಯ ಮಹಿಳೆಯರ ಶೌಚಾಲಯದಲ್ಲಿ, ಮೊಬೈಲ್ ಫೋನ್ ರಿಂಗ್ ಆಗುತ್ತಿರುವ ಶಬ್ದ ಕೇಳುತ್ತಿದೆ ಆದರೆ ಯಾರೂ ಇಲ್ಲ ಎಂದು ಮಾಹಿತಿ ಲಭ್ಯವಾಗುತ್ತದೆ. ತಕ್ಷಣ ಅಲ್ಲಿಗೆ ಹೋಗಿ ಅವರು ಪರಿಶೀಲನೆ ನಡೆಸಿದಾಗ ಶೌಚಾಲಯದ ಒಳಗಡೆ ಮೇಲ್ಬಾಗದ ಕ್ಯಾಸ್ಟ್ ಪ್ಯಾನ್ ಬಳಿ ಮೊಬೈಲ್ ಫೋನ್ ಒಂದು ಪತ್ತೆಯಾಗಿದೆ.
ಯಾರೋ ಮೊಬೈಲ್ ಫೋನ್ ಇಟ್ಟು ಮಹಿಳೆಯರು ಶೌಚ ಮಾಡುವ ದೃಶ್ಯವನ್ನು ಸರೆಹಿಡಿಯಲು ಇರಿಸಿದಂತೆ ಕಂಡು ಬರುತ್ತಿತ್ತು. ಈ ಬಗ್ಗೆ ಅವರು ಮಂಗಳೂರು ಉತ್ತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ 17 ವರ್ಷದ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.