ಫಲಿಂತಾಶಕ್ಕೂ ಮುನ್ನವೇ 3 ಕ್ಷೇತ್ರದಲ್ಲಿ ನಿಶ್ಚಿತ ಗೆಲುವಿನ ನಗೆಬೀರಿದ ಬಿಜೆಪಿ - ಕೈಚೆಲ್ಲಿದ ಕಾಂಗ್ರೆಸ್
ಬೆಂಗಳೂರು: ದೇಶದಲ್ಲಿ ಲೋಕಸಭೆ ಚುನಾವಣೆ ಇನ್ನೂ ನಡೆಯುತ್ತಿದೆ. ಫಲಿತಾಂಶಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕು. ಆದರೆ ಅದಕ್ಕಿಂತ ಮುನ್ನವೇ ಬಿಜೆಪಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಬಿಜೆಪಿಯ ಗೆಲುವಿನ ನಾಗಲೋಟ ಪ್ರಧಾನಮಂತ್ರಿ ನರೇಂದ್ರ ಮೋದಿಯ ತವರು ರಾಜ್ಯ ಗುಜರಾತ್‌ನಿಂದಲೇ ಶುರುವಾಗಿದೆ. ಸೂರತ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕಾರಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದೆ. ಇದು ಫಲಿತಾಂಶಕ್ಕೂ ಮುನ್ನ ಬಿಜೆಪಿಗೆ ಬಹುದೊಡ್ಡ ಬೂಸ್ಟರ್ ಸಿಕ್ಕಂತಾಗಿದೆ.
ಇದೀಗ ಈ ಗೆಲುವಿನ ಯಾನ, ಮಧ್ಯಪ್ರದೇಶ, ಒಡಿಶಾ, ರಾಜ್ಯಕ್ಕೂ ಹಬ್ಬಿದಂತಾಗಿದೆ. ಸದ್ಯ ಇಂದೋರ್ ಮತ್ತು ಒಡಿಶಾದ ಪುರಿ ಕ್ಷೇತ್ರಗಳು ಬಿಜೆಪಿ ಪಾಲಾಗಿದೆ. ಒಡಿಶಾದ ಪುರಿ ಲೋಕಸಭಾ ಕ್ಷೇತ್ರ ಹೈವೊಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿತ್ತು. ಆದರೆ ಆ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ದುಡ್ಡಿಲ್ಲವೆಂದು ಹೇಳಿ ನಾಮಪತ್ರ ಹಿಂಪಡೆದಿದ್ದಾರೆ. ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಧಿಡೀರನೇ ನಾಮಪತ್ರ ಹಿಂಪಡೆದು ಕೈ ಹೈಕಮಾಂಡ್‌ಗೆ ಶಾಕ್ ಕೊಟ್ಟಿದ್ದಾರೆ.
ಪುರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಸುಚರಿತ ಮೊಹಾಂತಿಯವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತ್ತು. ಆದರೆ ಸುಚರಿತಾ ಚುನಾವಣಾ ಪ್ರಚಾರಕ್ಕೆ ಹಣವಿಲ್ಲವೆಂದು ತಮ್ಮ ಟಿಕೆಟ್ ವಾಪಸ್ ನೀಡಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಇದು ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಿದೆ. ಇಲ್ಲಿ ಕೇಸರಿಯ ಪಾಳಯದ ಹಿರಿಯ ನಾಯಕ ಸಂಬಿತ್ ಪಾತ್ರಾ ಬಿಜೆಪಿಯಿಂದ ಸ್ಪರ್ಧಿಸಿದ್ದು, ಇದೀಗ ಸುಚರಿತಾ ತಮ್ಮ ನಾಮಪತ್ರವನ್ನು ಹಿಂಪಡೆದಿರುವುದರಿಂದ ಸಂಬಿತ್ ಪಾತ್ರ ಗೆಲುವಿನ ಹಾದಿ ಸುಲಭವಾಗಿದೆ.
ಇದಕ್ಕೂ ಮೊದಲು ಗುಜರಾತ್‌ನ ಸೂರತ್ ಮತ್ತು ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತಮ್ಮ ನಾಮಪತ್ರವನ್ನು ಹಿಂಪಡೆದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದರು. ಇಂಧೋರ್ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಸೇರಿದ್ದರು. ಅತ್ತ ಸೂರತ್‌ನಲ್ಲಿ ಬಿಜೆಪಿ ಅಭ್ಯರ್ಥಿ ಜಯ ಖಚಿತ ಎಂದು ಹೇಳಲಾಗಿದೆ. ಮೇ 25ರಂದು ಪುರಿ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದ್ದು, ಅದಕ್ಕೂ ಮುನ್ನವೇ ಕಾಂಗ್ರೆಸ್‌ಗೆ ಈ ಹೊಡೆತ ಬಿದ್ದಿದೆ.