ಮಂಗಳೂರು: ವಿಮಾನ ಪ್ರಯಾಣದ ವೇಳೆ ಅನುಚಿತ ವರ್ತನೆ ತೋರಿದ ಪ್ರಯಾಣಿಕ ಅರೆಸ್ಟ್
Saturday, May 11, 2024
ಮಂಗಳೂರು: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಬ್ಬಂದಿಯೊಂದಿಗೆ ಅಶಿಸ್ತಿನಿಂದ ವರ್ತಿಸಿ, ಇತರ ಪ್ರಯಾಣಿಕರಿಗೆ ತೊಂದರೆ ನೀಡಿ ಕಿಡಿಗೇಡಿತನ ಪ್ರದರ್ಶಿಸಿದ ಪ್ರಯಾಣಿಕನನ್ನು ಮಂಗಳೂರು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಬಜ್ಪೆ ಠಾಣಾ ಪೊಲೀಸ್ ಒಪ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಜ್ಪೆ ಠಾಣಾ ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಕೇರಳದ ಕಣ್ಣೂರು ನಿವಾಸಿ ಮುಹಮ್ಮದ್ ಬಿ.ಸಿ. ಅಶಿಸ್ತಿನಿಂದ ವರ್ತಿಸಿದ ವ್ಯಕ್ತಿ.
ಮೇ 8ರಂದು ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಮುಹಮ್ಮದ್ ಬಿ.ಸಿ. ಎಂಬ ಪ್ರಯಾಣಿಕ ಪ್ರಯಾಣ ಬೆಳೆಸಿದ್ದಾನೆ. ಈತ ಪ್ರಯಾಣದ ವೇಳೆ ವಿಮಾನದ ಸಿಬ್ಬಂದಿಯೊಂದಿಗೆ ಅಶಿಸ್ತಿನಿಂದ ವರ್ತಿಸಿ ಇತರ ಪ್ರಯಾಣಿಕರಿಗೆ ತೊಂದರೆ ನೀಡಿ ಕಿಡಿಗೇಡಿತನ ಪ್ರದರ್ಶಿಸಿದ್ದಾನೆ. ಆತನ ವರ್ತನೆ ಇತರ ಪ್ರಯಾಣಿಕರಿಗೆ ಅಪಾಯಕಾರಿ ಎಂಬಂತೆ ತೋರುತ್ತಿತ್ತು ಎನ್ನಲಾಗಿದೆ.
ಅದರಂತೆ ವಿಮಾನ ಮಂಗಳೂರು ವಿಮಾನನಿಲ್ದಾಣವನ್ನು ತಲುಪುತ್ತಿದ್ದಂತೆ ಆತನನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನೊಂದಿಗೆ ಬಜ್ಪೆ ಠಾಣೆಗೆ ಹಸ್ತಾಂತರಿಸಿದ್ದಾರೆ.
ಸದ್ಯ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.