ಬೆಳ್ತಂಗಡಿ: ಅಕ್ರಮ ಕಲ್ಲುಕ್ವಾರೆಗೆ ದಾಳಿ, ಸೊತ್ತುಗಳು ವಶಕ್ಕೆ - ಯುವಮೋರ್ಚಾ ಅಧ್ಯಕ್ಷನ ಸಹಿತ ಹಲವರು ಅರೆಸ್ಟ್
Sunday, May 19, 2024
ಬೆಳ್ತಂಗಡಿ: ತಾಲೂಕಿನ ಮೆಲಂತಬೆಟ್ಟು ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಕ್ವಾರೆಗೆ ಶನಿವಾರ ಸಂಜೆ ಜಂಟಿಯಾಗಿ ದಾಳಿ ನಡೆಸಿರುವ ಬೆಳ್ತಂಗಡಿ ತಹಶೀಲ್ದಾರ್ ಮತ್ತು ಬೆಳ್ತಂಗಡಿ ಪೊಲೀಸರು ಸ್ಫೋಟಕಗಳು ಸೇರಿದಂತೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಕಲ್ಲು ಕ್ವಾರೆ ನಡೆಸುತ್ತಿದ್ದ ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ರಾತ್ರಿಯೇ ಸ್ಟೇಷನ್ ಗೆ ಧಾವಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ ಬಂಧಿತ ಶಶಿರಾಜ್ ಶೆಟ್ಟಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಮೇಲಂತಬೆಟ್ಟು ಮೂಡಲ ನಿವಾಸಿ ಸೂರಪ್ಪ ಪೂಜಾರಿ ಎಂಬವರ ಜಾಗದಲ್ಲಿ ಈ ಅಕ್ರಮ ಕಲ್ಲುಕ್ವಾರೆ ಕಾರ್ಯಾಚರಣೆ ನಡೆಸುತ್ತಿತ್ತು.. ಬಿಜೆಪಿ ಮುಖಂಡ ಪ್ರಮೋದ್ ದಿಡುಪೆ ಹಾಗೂ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ನಡೆಸುತ್ತಿದ್ದರು. ಈ ಕಲ್ಲಿನ ಕ್ವಾರಿ ಯಾವುದೇ ಸಮರ್ಪಕವಾದ ದಾಖಲೆಗಳಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶಶಿರಾಜ್ ಶೆಟ್ಟಿಯನ್ನು ಬಂಧಿಸಿದ್ದಾರೆ.
ದಾಳಿಯ ವೇಳೆ ಒಂದು ಹಿಟಾಚಿ, ಒಂದು ಕಂಪ್ರೆಸರ್ ಮೆಷಿನ್, ಒಂದು ಕಾರು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.