ಮದುವೆ ಸಂಭ್ರಮದಲ್ಲಿ ಮೈಮರೆತು ಮೂರು ವರ್ಷದ ಮಗುವನ್ನು ಕಾರಿನಲ್ಲಿಯೇ ಬಿಟ್ಟು ಲಾಕ್ ಮಾಡಿ ಹೊರಟ ಹೆತ್ತವರು: ವಿಲವಿಲ ಒದ್ದಾಡಿ ಪ್ರಾಣಬಿಟ್ಟ ಬಾಲಕಿ
Friday, May 17, 2024
ರಾಜಸ್ಥಾನ: ಮದುವೆ ಸಮಾರಂಭದಲ್ಲಿ ಭಾಗವಹಿಸುವ ಅರ್ಜೆಂಟ್ ನಲ್ಲಿ ಕುಟುಂಬವೊಂದು ತಮ್ಮ ಮೂರು ವರ್ಷದ ಮಗುವನ್ನೇ ಮರೆತ ಪರಿಣಾಮ ಕಾರಿನೊಳಗೆ ಲಾಕ್ ಆದ ಮಗು ಉಸಿರುಗಟ್ಟಿ ಮೃತಪಟ್ಟ ಆಘಾತಕಾರಿ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
ಬುಧವಾರ ಸಂಜೆ ಬಾಲಕಿಯ ತಂದೆ ಪ್ರದೀಪ್ ನಗರ್ ತನ್ನ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರಿನಲ್ಲಿ ತೆರಳಿದ್ದಾರೆ. ಕಾರು ನಿಲ್ಲಿಸಿದ ಸಂದರ್ಭ ಅವರ ಪತ್ನಿ ಹಾಗೂ ಹಿರಿಯ ಪುತ್ರಿ ಕಾರಿನಿಂದ ಇಳಿದಿದ್ದಾರೆ. ಆದರೆ ಕಾರಿನ ಹಿಂಬದಿ ಸೀಟಿನ ಮೇಲಿದ್ದ ಮೂರೂ ವರ್ಷದ ಮಗು ಮಾತ್ರ ಕಾರಿನೊಳಗೆಯೇ ಇತ್ತು. ಮದುವೆಯ ಗಡಿಬಿಡಿಯಲ್ಲಿ ತಾಯಿಗೂ ಮಗುವಿನ ಪರಿವೇ ಇರಲಿಲ್ಲ.
ಮದುವೆ ಸಮಾರಂಭಕ್ಕೆ ಬಂದಿದ್ದ ಸಂಬಂಧಿಕರು ಕಾರಿನ ಬಳಿ ಮಾತನಾಡಲು ಬಂದಿದ್ದಾರೆ. ಈ ವೇಳೆ ಕಾರಿನೊಳಗೆ ಮಗು ಇರುವುದನ್ನು ಮೈಮರೆತ ದಂಪತಿ ಕಾರಿನಿಂದ ಇಳಿದು ಕಾರ್ ಲಾಕ್ ಮಾಡಿ ಹಾಲ್ ಒಳಗೆ ಹೋಗಿದ್ದಾರೆ. ಆದರೆ ಬಹಳಷ್ಟು ಹೊತ್ತಿನ ಬಳಿಕ ಕುಟುಂಬ ಸದಸ್ಯರು ಪರಸ್ಪರ ಮಾತನಾಡುವ ವೇಳೆ ಮಗುವಿನ ಬಗ್ಗೆ ಮಾತನಾಡಿದ್ದಾರೆ ಆಗ ಸಣ್ಣ ಮಗು ತಮ್ಮ ಬಳಿ ಇಲ್ಲ ಕಾರಿನೊಳಗೆ ಬಾಕಿಯಾಗಿದೆ ಎಂದು ಗೊತ್ತಾಗಿ ಅಲ್ಲಿಗೆ ಓಡೋಡಿ ಬಂದಿದ್ದಾರೆ. ಆದರೆ ಪೋಷಕರು ಕಾರಿನ ಬಾಗಿಲು ತೆರೆದು ನೋಡಿದಾಗ ಮಗು ಅಸ್ವಸ್ಥ ಸ್ಥಿತಿಯಲ್ಲಿತ್ತು ತಕ್ಷಣ ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದ ವೇಳೆ ಪರಿಶೀಲಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಸದ್ಯ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.