ಮಂಗಳೂರು: ಶಾಲಾ ಕಂಪೌಂಡ್ ಕುಸಿದು ಹರೇಕಳ ಹಾಜಬ್ಬರ ಸ್ಕೂಲ್ ವಿದ್ಯಾರ್ಥಿನಿ ಮೃತ್ಯು
Monday, May 20, 2024
ಮಂಗಳೂರು: ಶಾಲೆಯ ಕಂಪೌಂಡ್ ಕುಸಿದು ಹರೇಕಳ ಹಾಜಬ್ಬರ ನ್ಯೂಪಡ್ಪು ಸ.ಹಿ.ಪ್ರಾ. ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಸಂಭವಿಸಿದೆ.
ನ್ಯೂಪಡ್ಪು ನಿವಾಸಿ ಸಿದ್ದೀಕ್ ಹಾಗೂ ಜಮೀಲಾ ದಂಪತಿ ಪುತ್ರಿ ಶಾಝಿಯಾ ಬಾನು (7) ಮೃತಪಟ್ಟ ಬಾಲಕಿ.
ಸೋಮವಾರ ಸಂಜೆ ವೇಳೆ ಸುರಿದ ಮಳೆಯಿಂದಾಗಿ ದುರ್ಘಟನೆ ಸಂಭವಿಸಿದೆ. ಅಕ್ಷರ ಸಂತ ಹರೇಕಳ ಹಾಜಬ್ಬರ ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಶಿಬಿರ ನಡೆಯುತ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ನಡೆಯುತ್ತಿತ್ತು. ಇದರಲ್ಲಿ ವಿದ್ಯಾರ್ಥಿನಿ ಶಾಝಿಯಾ ಭಾನು ಕೂಡಾ ಭಾಗವಹಿಸಿದ್ದಳು.
ಸಂಜೆ ವೇಳೆ ಶಾಲಾ ಕಂಪೌಂಡ್ ಗೇಟ್ ಪಕ್ಕ ಆಟವಾಡುತ್ತಿರುವಾಗಲೇ ಏಕಾಏಕಿ ಕಂಪೌಂಡ್ ಶಾಝಿಯಾ ಮೇಲೆಯೇ ಕುಸಿದಿದೆ. ತಕ್ಷಣ ಸ್ಥಳೀಯರು ಆಕೆಯ ರಕ್ಷಣೆಗೆ ಧಾವಿಸಿದರೂ, ಗಂಭೀರವಾಗಿ ಗಾಯಗೊಂಡ ಬಾಲಕಿಯ ಪ್ರಾಣಪಕ್ಷಿ ಹಾರಿಹೋಗಿದೆ. ಬೆಳಗ್ಗಿನಿಂದಲೇ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಆಗಾಗ್ಗೆ ಮಳೆಯಾಗುತ್ತಿತ್ತು. ಪರಿಣಾಮ ಶಿಥಿಲಗೊಂಡು ಕಂಪೌಂಡ್ ಕುಸಿದು ಬಿದ್ದಿದೆ. ಘಟನಾ ಸ್ಥಳಕ್ಕೆ ಹರೇಕಳ ಗ್ರಾ.ಪಂ ಅಧಿಕಾರಿಗಳು, ಕೊಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.