ಮಗು ಸತ್ತಿದೆ ಎಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ - ಕೆಮ್ಮಿ ತಾನಿನ್ನು ಜೀವಂತವಿದ್ದೇನೆ ಎಂದು ತಿಳಿಸಿದ ಹಸುಗೂಸು
Friday, May 24, 2024
ಬಾಗಲಕೋಟೆ: ಮೃತಪಟ್ಟಿದೆ ಎಂದು ತಿಳಿದು ಹಸುಗೂಸನ್ನು ಇನ್ನೇನು ಅಂತ್ಯಸಂಸ್ಕಾರ ಮಾಡಬೇಕು ಎಂದು ತಯಾರಿ ನಡೆಸುತ್ತಿದ್ದಾಗಲೇ ಪವಾಡವೆಂಬಂತೆ ಮಗು ಕೆಮ್ಮಿದ್ದು, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ವಿಚಿತ್ರ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಗುರುವಾರ ನಡೆದಿದೆ. ಮಗು ಪ್ರಜ್ಞೆ ತಪ್ಪಿದ್ದರಿಂದ ಅದು ಸತ್ತಿದೆಯೆಂದು ಭಾವಿಸಿದ ಕುಟುಂಬ ಅಂತ್ಯಸಂಸ್ಕಾರಕ್ಕೆ ಮುಂದಾಗಿದೆ. ಆದರೆ ಅಷ್ಟರಲ್ಲೇ ಮಗು ಕೆಮ್ಮಿದೆ. ಆದ್ದರಿಂದ ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸವರಾಜ ಭಜಂತ್ರಿ ಹಾಗೂ ನೀಲಮ್ಮ ಎಂಬ ದಂಪತಿಯ ದ್ಯಾಮಣ್ಣ ಭಜಂತ್ರಿ ಎಂಬ 13 ತಿಂಗಳ ಹಸುಗೂಸು ಹೃದಯ ಸಂಬಂಧಿ ಕಾಯಿಲೆಯಿಂದ ಉಸಿರಾಟದ ತೊಂದರೆಗೊಳಗಾಗಿತ್ತು. ಇದರಿಂದ ಮಗುವಿಗೆ ಅಂಗಾಗ ವೈಫಲ್ಯವೂ ಇತ್ತು. ಆದ್ದರಿಂದ ಕೆಲದಿನಗಳ ಹಿಂದೆ ಮಗುವನ್ನು ಬಾಗಲಕೋಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮಗು ಬದುಕುವುದು ಕಷ್ಟ ಎಂದು ಹೇಳಿದಾಗ ಪೋಷಕರು ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಮಗು ಪ್ರಜ್ಞೆ ತಪ್ಪಿದೆ. ಇದರಿಂದ ಮಗು ಸಾವನ್ನಪ್ಪಿದೆ ಎಂದು ಭಾವಿಸಿದ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಅಷ್ಟರಲ್ಲಿ ಮಗು ಕೆಮ್ಮಿದ್ದು, ಇದರಿಂದ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.
ಇದನ್ನು ದೇವರ ಪವಾಡ ಎಂದು ಭಾವಿಸಿ ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದು ಮುರ್ತುಜಾ ಖಾದ್ರಿ ಪವಾಡ ಎಂದು ಭಾವಿಸಿ ಪೋಷಕರು ಮಗುವನ್ನು ದರ್ಗಾಕ್ಕೆ ಕರೆದೊಯ್ದು ನಂತರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಇಳಕಲ್ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಆಸ್ಪತ್ರೆ ವೈದ್ಯರು, 'ಮಗು ಬದುಕುವುದು ಕಷ್ಟ ಎಂದು ಮಾತ್ರ ಬಾಗಲಕೋಟೆ ಖಾಸಗಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಆದರೆ ಅದು ಮೃತಪಟ್ಟಿದೆ ಎಂದು ಯಾವ ವೈದ್ಯರೂ ಘೋಷಣೆ ಮಾಡಿಲ್ಲ. ಆದರೆ ಕುಟುಂಬಸ್ಥರು ಮಗು ಪ್ರಜ್ಞೆ ತಪ್ಪಿದ್ದನ್ನೇ ತಪ್ಪಾಗಿ ಭಾವಿಸಿ ಅದು ಮೃತಪಟ್ಟಿದೆ ಎಂದು ಅರ್ಥೈಸಿಕೊಂಡಿದ್ದಾರೆ. ಸದ್ಯ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ನಾವು ಮಗುವಿಗೆ ಚಿಕಿತ್ಸೆ ನೀಡುತ್ತಿದ್ದೇವೆ' ಎಂದಿದ್ದಾರೆ.