ಪುತ್ತೂರು: ಜ್ವರ ಎಂದು ಹೋದವರಿಗೆ ಗೆಡ್ಡೆ ಚಿಕಿತ್ಸೆ ಮಾಡಿದ ವೈದ್ಯನಿಂದ ಎಡವಟ್ಟು - ರೋಗಿ ಬಲಿ
Thursday, May 16, 2024
ಪುತ್ತೂರು: ಜ್ವರ ಎಂದು ಚಿಕಿತ್ಸೆಗೆ ಹೋದ ವ್ಯಕ್ತಿಗೆ ಗಡ್ಡೆ ಚಿಕಿತ್ಸೆ ಮಾಡಿದ ಪರಿಣಾಮ ರೋಗಿ ಮೃತಪಟ್ಟಿದ್ದಾನೆಂದು ಆರೋಪಿಸಿ ದೂರು ದಾಖಲಾಗಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಕಕ್ಕೆಪದವಿನ ಪಿಲಿಬೈಲ್ ನಿವಾಸಿ ಕೃಷ್ಣಪ್ಪ ಗೌಡ(47) ಮೃತಪಟ್ಟ ವ್ಯಕ್ತಿ.
ಕೃಷ್ಣಪ್ಪ ಗೌಡರಿಗೆ ವಿಪರೀತ ಜ್ವರವಿದ್ದ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರನ್ನು ತಪಾಸಣೆ ಮಾಡಿ ವೈದ್ಯರು ನಾಲಿಗೆಯಡಿ ಭಾಗದಲ್ಲಿ ಗೆಡ್ಡೆಯಿದೆ. ಇದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬೇಕೆಂದು ವೈದ್ಯರು ಕೃಷ್ಣಪ್ಪರವರ ಮನೆಯವರಿಗೆ ಸೂಚಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡುವುದಕ್ಕಿಂತ ಮೊದಲು ಮೃತರ ಪತ್ನಿ ಸರೋಜಿನಿ ಮತ್ತು ಅತ್ತಿಗೆಯಿಂದ ಆಸ್ಪತ್ರೆಯಲ್ಲಿ ಸಹಿ ಹಾಕಿಸಿಕೊಳ್ಳಲಾಗಿದೆ.
ಆದರೆ ಗೆಡ್ಡೆ ಚಿಕಿತ್ಸೆಯ ಬಳಿಕ ಕೃಷ್ಣಪ್ಪ ಗೌಡ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ರೊಚ್ಚಿಗೆದ್ದ ಸಂಬಂಧಿಕರು, ಸಾರ್ವಜನಿಕರು ರಾತ್ರೋರಾತ್ರಿ ಆಸ್ಪತ್ರೆ ಮುಂಭಾಗ ಜಮಾಯಿಸಿದ್ದಾರೆ. ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ವೈದ್ಯರ ಎಡವಟ್ಟಿನಿಂದಲೇ ಕೃಷ್ಣಪ್ಪ ಗೌಡರ ಸಾವು ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.