ಪ್ರಜ್ವಲ್ ರೇವಣ್ಣನ ಪ್ರಕರಣದಲ್ಲಿ ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಸುದ್ದಿ ಪ್ರಸಾರಕ್ಕೆ ತಾತ್ಕಾಲಿಕ ಪ್ರತಿಬಂಧ
Monday, May 6, 2024
ಬೆಂಗಳೂರು: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಜೆಡಿಎಸ್‌ನ ಉಚ್ಛಾಟಿತ ಸಂಸದ ಪ್ರಜ್ವಲ್ ರೇವಣ್ಣನಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ನಕಲಿ ಸುದ್ದಿ, ಫೋಟೊ ಅಥವಾ ವೀಡಿಯೊಗಳು ಅಥವಾ ತಿರುಚಿದ ಸುದ್ದಿಗಳ ಪ್ರಸಾರ ಅಥವಾ ಪ್ರಕಟ ಮಾಡದಂತೆ ಕೋರ್ಟ್ ತಾತ್ಕಾಲಿಕ ಪ್ರತಿಬಂಧ ವಿಧಿಸಿದೆ.
ಈ ಸಂಬಂಧ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿರುವ ಅಸಲು ದಾವೆಯ ವಿಚಾರಣೆಯನ್ನು ರಜಾಕಾಲೀನ ಸಿಸಿಎಚ್ ಕೋರ್ಟ್ ನ್ಯಾಯಾಧೀಶ ಎಚ್.ಎ.ಮೋಹನ್ ವಿಚಾರಣೆ ನಡೆಸಿದ್ದರು. ಪ್ರತಿವಾದಿಗಳಾದ ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಒಟ್ಟು 89 ಮಾಧ್ಯಮ ಸಂಸ್ಥೆಗಳ ವಿರುದ್ಧ ತಾತ್ಕಾಲಿಕ ಪ್ರತಿಬಂಧಕ ಆದೇಶ ನೀಡಿದ್ದಾರೆ.
'ಪ್ರತಿವಾದಿ ಮಾಧ್ಯಮಗಳು ತಮ್ಮ ಬಳಿ ಪ್ರಬಲವಾದ ಸಾಕ್ಷ್ಯ ಹೊಂದಿದ್ದರೆ ಸುದ್ದಿ ಪ್ರಸಾರ ಅಥವಾ ಪ್ರಕಟ ಮಾಡದಂತೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿಲ್ಲ' ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಪ್ರತಿವಾದಿ ಮಾಧ್ಯಮ ಸಂಸ್ಥೆಗಳಿಗೆ ಸಮನ್ಸ್ ಜಾರಿಗೊಳಿಸಲು ಆದೇಶಿಸಲಾಗಿದ್ದು, ಇದೇ 29ಕ್ಕೆ ವಿಚಾರಣೆ ಮುಂದೂಡಲಾಗಿದೆ.